ರಾಜಧಾನಿಯಲ್ಲಿ ಶನಿವಾರ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬುಧವಾರ ಸಂಪುಟ ಸಭೆ ನಡೆಸಲಿದ್ದು, ಭಯೋತ್ಪಾದನೆ ನಿಗ್ರಹದ ಕುರಿತಾಗಿ ಚರ್ಚೆ ನಡೆಯುವುದರೊಂದಿಗೆ, ನೂತನ ಆಂತರಿಕ ಭದ್ರತಾ ಖಾತೆಯನ್ನು ರಚಿಸುವ ಪ್ರಸ್ತಾಪವಿರಿಸುವ ಸಾಧ್ಯತೆ ಇದೆ.
ಆಂತರಿಕ ಭದ್ರತಾ ಸಚಿವ ಹುದ್ದೆಯನ್ನು ರಚಿಸುವ ಪ್ರಸ್ತಾಪವನ್ನು ಕೆಲವು ಯುಪಿಎ ನಾಯಕರು ಹೊಂದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಇದರೊಂದಿಗೆ, ಬುಧವಾರ ಸಂಜೆ ನಡೆಯಲಿರುವ ಈ ವಿಶೇಷ ಅಧಿವೇಶನವು ನಿಯಮಿತ ಕಾರ್ಯಕಲಾಪವಾಗಿರದೆ, ಭಯೋತ್ಪಾದನೆಯ ಕುರಿತಾಗಿ ಚರ್ಚೆ ನಡೆಸಲು ಕರೆಯಲಾಗಿರುವ ವಿಶೇಷ ಅಧಿವೇಶನವಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಸರಣಿ ಸ್ಫೋಟದ ನಂತರ ಭಯೋತ್ಪಾದನೆ ಸಂಬಂಧಿ ಸಮಸ್ಯೆಗಳು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಿಶೇಷ ಸಭೆಯನ್ನು ನಡೆಸುವಂತೆ ಬಹಿರಂಗ ಬೇಡಿಕೆಯನ್ನೊಡ್ಡಿರುವ ಕಾರಣ ಈ ವಿಶೇಷ ಅಧಿವೇಶನವು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆಯಲಿದೆ.
ಗುಪ್ತಚರ ಇಲಾಖೆಯ ಕಾರ್ಯನಿರ್ವಹಣೆಯ ಕುರಿತಾಗಿ ಆತಂಕ ವ್ಯಕ್ತಪಡಿಸಿದ್ದ ಲಾಲೂ ಪ್ರಸಾದ್, ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲು ಸರ್ವ ರಾಜಕೀಯ ಪಕ್ಷ ತುರ್ತು ಸಭೆಯನ್ನು ನಡೆಸುವಂತೆಯೂ ಆಗ್ರಹಿಸಿದ್ದರು.
ಭಯೋತ್ಪಾದನೆ ನಿಗ್ರಹದ ಕುರಿತಾದ ಯುಪಿಎ ಸರಕಾರದ ವೈಫಲ್ಯ ಮತ್ತು ಇದರ ಕುರಿತಾದ ಮೃದು ಧೋರಣೆಯ ಬಗ್ಗೆ ಯುಪಿಎ ಸರಕಾರವು ವಿರೋಧ ಪಕ್ಷದಿಂದ ನಿರಂತರ ಟೀಕೆಯನ್ನು ಎದುರಿಸುತ್ತಿದೆ.
|