ಅಮೆರಿಕದ ದೈತ್ಯ ಸಂಸ್ಥೆ ಲೆಹ್ಮಾನ್‌ನ ಕುಸಿತವು ಆರ್ಥಿಕ ರಂಗದಲ್ಲಿ ಸಾಕಷ್ಟು ಕಂಪನ ಉಂಟು ಮಾಡಿರುವುದರೊಂದಿಗೆ, ಇದರ ಬಿಸಿ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ)ಗಳಿಗೂ ತಟ್ಟಿದೆ.
ಲೆಹ್ಮಾನ್ ಬ್ರದರ್ಸ್ ಸಂಸ್ಥೆಯು ಮಾರ್ಚ್ 2008ರಲ್ಲಿ ಐಐಎಂನ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು. ಐಐಎಂ-ಎ ಪ್ಲೇಸ್‌ಮೆಂಟ್ ಸೆಲ್‌ನ ಮಿಹಿಲ್ ಲಾಲ್ ಅವರು, ಲೆಹ್ಮಾನ್ ಕುಸಿತದ ಪರಿಣಾಮದ ಕುರಿತು ಈಗಲೇ ಏನನ್ನೂ ಹೇಳುವಂತಿಲ್ಲ, ನವೆಂಬರ್‌ನಲ್ಲಿ ಒಂದು ಹಂತದ ಆಯ್ಕೆಗಳು ನಡೆಯಲಿದ್ದು, ಫೆಬ್ರವರಿಯಲ್ಲಿ ಅಂತಿಮ ಆಯ್ಕೆಗಳು ನಡೆಯುತ್ತಿವೆ ಎಂದು ಹೇಳುತ್ತಾರೆ.
ಬೆಂಗಳೂರಿನ ಐಐಎಂ ವಿದ್ಯಾರ್ಥಿಗಳಲ್ಲಿ 2009ರ ಅವಧಿಗೆ ಶೇ.68ರಷ್ಟು ಮಂದಿ ತಮ್ಮ ಇಂಟರ್ನ್‌ಶಿಫ್‌ಗೆ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಆಯ್ದುಕೊಂಡರೆ, ಶೇ.17ರಷ್ಟು ಮಂದಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ಆರಿಸಿಕೊಂಡಿದ್ದಾರೆ. ಇಲ್ಲಿ ಪ್ರತಿವರ್ಷ ಲೆಹ್ಮಾನ್ ಬ್ರದರ್ಸ್ ಸಂಸ್ಥೆಯು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಿತ್ತು. ಲೆಹ್ಮಾನ್ 13 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದರೆ, ಜೆಪಿ ಮಾರ್ಗನ್ ಮತ್ತು ಮಾಕ್ವಯರ್ 11 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದ್ವಿತೀಯ ಸ್ಥಾನದಲ್ಲಿದೆ.
ಲೆಹ್ಮಾನ್ ಸಂಸ್ಥೆಯು ದಿವಾಳಿ ಎದ್ದಿದೆ ಎಂಬ ಸುದ್ದಿಯ ಬಳಿಕ ಐಐಎಂ-ಬಿಯ ಪ್ಲೇಸ್ಮೆಂಟ್ ಮುಖ್ಯಸ್ಥರು ಈ ಬಾರಿ ಲೆಹ್ಮಾನ್ ಕ್ಯಾಂಪಸ್ ಸಂದರ್ಶನವನ್ನು ಪರಿಗಣಿಸುವುದಿಲ್ಲ ಎಂದು ಹೇಳಿದೆ. ಮೆರಿಲ್ ಲಿಂಚ್ ಅನ್ನು ಬ್ಯಾಂಕ್ ಆಫ್ ಅಮೆರಿಕ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಆಶಾವಾದ ಹೊಂದಿದ್ದು, ಆಯ್ಕೆಗಾಗಿ ಬ್ಯಾಂಕ್ ಆಫ್ ಅಮೆರಿಕವನ್ನು ವಿನಂತಿಸಲೂ ಬಹುದು ಎಂದು ಅವರು ಹೇಳಿದ್ದಾರೆ.
ಅಂತೆಯೇ ಕೋಲ್ಕತಾ ಐಐಎಂ ಸಹ ಚಿಂತೆಗೆ ಬಿದ್ದಿದೆ. ಲೆಹ್ಮಾನ್ ಇದೀಗಾಲೇ ಪೂರ್ವ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿದ್ದು, ಕನಿಷ್ಠ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಪತ್ರಗಳು ತಲುಪುವಷ್ಟರಲ್ಲೇ ಲೆಹ್ಮಾನ್ ಕುಸಿದಿರುವ ಸುದ್ದಿ ಹೊರಬಿದ್ದಿದೆ.
|