ಆರ್ಥಿಕ ವ್ಯವಸ್ಥೆಯು ತುಂಬ ಬಿಗಿಯಾದಲ್ಲಿ ಹಣದ ದ್ರವ್ಯತೆಗಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಜಾಗತಿಕ ಪ್ರಕ್ಷುಬ್ಧತೆಯು ಭಾರತದಲ್ಲಿ ಸಾಲ ಲಭ್ಯತೆಯ ಮೇಲೆ ಭಾಗಶಃ ಪರಿಣಾಮ ಬೀರಬಹುದು ಎಂದೂ ಅವರು ಹೇಳಿದ್ದಾರೆ.
ಭಾರತದ ಬ್ಯಾಂಕುಗಳ ಮೇಲೆ ಲೆಹ್ಮಾನ್ ದಿವಾಳಿ ಘೋಷಣೆಯು ಯಾವುದೇ ಪರಿಣಾಮ ಬೀರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಭಯಪಡುವ ಅಗತ್ಯವಿಲ್ಲ. ಹಣಕಾಸು ಸಚಿವನಾಗಿ, ನಮ್ಮ ಎಲ್ಲ ಹಣಕಾಸು ಸಂಸ್ಥೆಗಳು ಸುದೃಢವಾಗಿವೆ ಎಂದು ನಾನು ಭರವಸೆ ನೀಡುತ್ತೇನೆ. ಐಆರ್‌ಡಿಎ ಮತ್ತು ಆರ್‌ಬಿಐಗಳೂ ಸಹ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದಿವೆ" ಎಂಬುದಾಗಿ ಚಿದಂಬರಂ ಹೇಳಿದ್ದಾರೆ.
ಹಣದ ದ್ರವ್ಯತೆ ಒದಗಿಸಲು ಸರಕಾರ ಸಾಧ್ಯ ಇರುವ ಎಲ್ಲವನ್ನೂ ಮಾಡಲಿದೆ ಎಂದು ಅವರು ತಿಳಿಸಿದರು.
"ಸಾಲ ಮಾರುಕಟ್ಟೆಯಲ್ಲಿ ಸ್ವಲ್ಪ ಬಿಗಿ ಇರಬಹುದು. ನಾವು ಪರಿಸ್ಥಿತಿಯನ್ನು ತುಂಬ ನಿಕಟವಾಗಿ ವೀಕ್ಷಿಸುತ್ತಿದ್ದೇವೆ. ಹಣದ ಹೆಚ್ಚುವರಿ ಹರಿವಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಸಚಿವರು ಹೇಳಿದ್ದಾರೆ.
|