ಗುಜರಾತಿನ ಗೋಧ್ರಾದಲ್ಲಿ 2002ರಲ್ಲಿ ನಡೆದಿರುವ ರೈಲು ಬೋಗಿಗೆ ಕಿಚ್ಚಿಟ್ಟು ಸಜೀವ ದಹನ ನಡೆಸಿದ ಹಾಗೂ ಬಳಿಕ ನಡೆದ ಗಲಭೆಗಳ ತನಿಖೆಗಾಗಿ ನೇಮಿಸಲಾಗಿರುವ ನಾನಾವತಿ ಆಯೋಗವು ತನ್ನ ವರದಿಯನ್ನು ಗುರುವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದೆ.
ಗುಜರಾತಿನಲ್ಲಿ ನಡೆದಿರುವ ಗಲಭೆಗಳ ತನಿಖೆ ನಡೆಸುತ್ತಿರುವ ಸಮಿತಿಯ ನೇತೃತ್ವವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಜಿ.ಟಿ.ನಾನಾವತಿ ವಹಿಸಿದ್ದಾರೆ.
ಆರು ವರ್ಷಗಳಿಂದ ತನಿಖೆ ನಡೆಸುತ್ತಿರುವ ದ್ವಿಸದಸ್ಯ ಸಮಿತಿಯು ಸುಮಾರು ಒಂದು ಸಾವಿರ ಸಾಕ್ಷಿಗಳ ವಿಚಾರಣೆ ನಡೆಸಿದೆ.
ಗುಜರಾತ್ ಗೃಹಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ವರದಿಯನ್ನು ಸಮಿತಿಯು ಮುಖ್ಯಮಂತ್ರಿಯವರಿಗೆ ಸಲ್ಲಿಸಿತು ಎಂದು ಮೂಲಗಳು ತಿಳಿಸಿವೆ. ಸಮಿತಿಯು ಸದ್ಯವೇ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ ಎಂದೂ ಮೂಲಗಳು ಹೇಳಿವೆ.
ವರದಿಯಲ್ಲಿ ಅಡಕವಾಗಿರುವ ವಿಚಾರಗಳು ತಕ್ಷಣಕ್ಕೆ ಗೊತ್ತಾಗಿಲ್ಲ.
ಗೋಧ್ರಾದಲ್ಲಿ 2002ರ ಫೆಬ್ರವರಿ 27ರಂದು ದುಷ್ಕರ್ಮಿಗಳು ನಡೆಸಿರುವ ಈ ಘಟನೆಯಲ್ಲಿ ರೈಲ್ವೇ ಬೋಗಿಯಲ್ಲಿ ಸುಟ್ಟು ಕರಕಲಾದ 58 ಮಂದಿಯಲ್ಲಿ 25 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದರು. ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರನ್ನೊಳಗೊಂಡಿದ್ದ ನಾಲ್ಕು ಬೋಗಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆಯ ಬಳಿಕ ಗುಜರಾತಿನಾದ್ಯಂತ ಕೋಮು ಹಿಂಸಾಚಾರ ನಡೆದಿದ್ದು ಸಾವಿರಕ್ಕಿಂತಲೂ ಅಧಿಕ ಮಂದಿ ಸಾವನ್ನಪ್ಪಿದ್ದರು.
|