ರಾಜಧಾನಿ ದೆಹಲಿಯಲ್ಲಿ ಆಂತರಿಕ ಭದ್ರತೆಯನ್ನು ಅಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು, ಹೆಚ್ಚುವರಿಯಾಗಿ 6,712 ಹುದ್ದೆಗಳು ಮತ್ತು 130 ವಾಹನಗಳನ್ನು ದೆಹಲಿ ಪೊಲೀಸ್ ವಿಭಾಗಕ್ಕೆ ಮಂಜೂರು ಮಾಡಿದೆ.
ಭಯೋತ್ಪಾದಕರು ಅನುಸರಿಸುತ್ತಿರುವ ಹೊಸ ಕಾರ್ಯವಿಧಾನದ ವಿಶ್ಲೇಷಣೆಗಾಗಿ ಹೊಸದೊಂದು ದಳವನ್ನು ರಚಿಸುವುದು ಸೇರಿದಂತೆ ಗುಪ್ತಚರ ಯಂತ್ರವನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಸರಕಾರ ಘೋಷಿಸಿದೆ.
ಆದರೆ, ಫೋಟಾದಂತಹ ಯಾವುದೇ ಹೊಸ ಭಯೋತ್ಪಾದನಾ ವಿರೋಧಿ ಕಾನೂನನ್ನು ಜಾರಿಗೆ ತರುವುದನ್ನು ಸರಕಾರ ಪರೋಕ್ಷವಾಗಿ ತಳ್ಳಿಹಾಕಿದೆ.
"ಅದು ಮಾನವ ಹಕ್ಕುಗಳ ವಿರುದ್ಧದ ಕಾನೂನು. ಪ್ರಸ್ತುತವಿರುವ ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಸೂಕ್ತವಾಗಿ ಜಾರಿಗೆ ತಂದಲ್ಲಿ ಹೆಚ್ಚುವರಿ ಕಾನೂನಿನ ಅವಶ್ಯಕತೆ ಇಲ್ಲ" ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್.ದಾಸ್‌ಮುನ್ಶಿ ಹೇಳಿದ್ದಾರೆ.
"ಕಠಿಣ ಕಾನೂನೆಂದರೇನು? ನಮ್ಮಲ್ಲಿರುವ ಕೆಲವು ಕಾನೂನುಗಳು ಅಮೆರಿಕ ಹಾಗೂ ಬ್ರಿಟನ್ನಿನಲ್ಲಿರುವ ಕಾನೂನಿಗಿಂತ ಹೆಚ್ಚು ಕಠಿಣವಾಗಿವೆ" ಎಂದವರು ನುಡಿದರು. ಫೋಟಾದಂತಹ ಕಾನೂನನ್ನು ಜಾರಿಗೆ ತರಲು ಸರಕಾರ ಯೋಜಿಸುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮೇಲಿನಂತೆ ನುಡಿದರು.
|