ಒರಿಸ್ಸಾ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕೇಂದ್ರ ಸರಕಾರವು ಸಂವಿಧಾನದ ವಿಧಿ 355ರನ್ವಯ ಎಚ್ಚರಿಕೆ ನೀಡಿದೆ. ಹಿಂಸಾಚಾರವು ಕಡಿಮೆಗೊಳ್ಳದಿದ್ದಲ್ಲಿ ಈ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ.
ಸಂವಿಧಾನದ ವಿಧಿ 355ರ ಪ್ರಕಾರ ರಾಷ್ಟ್ರವನ್ನು ಬಾಹ್ಯ ಮತ್ತು ಆಂತರಿಕ ಗಲಭೆಗಳಿಂದ ರಕ್ಷಿಸುವುದು ಮತ್ತು, ರಾಜ್ಯಗಳು ಸಂವಿಧಾನದ ವಿಧಿಗಳಿಗೆ ಬದ್ಧವಾಗಿದೆ ಎಂದು ಖಚಿತ ಪಡಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ.
ಸಂವಿಧಾನ ಯಂತ್ರವು ವಿಫಲಗೊಂಡಾಗ, ರಾಜ್ಯಪಾಲರ ವರದಿಯಾಧಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವಲ್ಲಿ ಸಂವಿಧಾನದ ವಿಧಿ 355 ಮೊದಲ ಹೆಜ್ಜೆಯಾಗಿದೆ.
ರಾಷ್ಟ್ರದ ವಿವಿಧ ಭಾಗಗಳಿಂದ ಪ್ರಾರ್ಥನಾ ಮಂದಿರಗಳು ಮತ್ತು ಧರ್ಮಗುರುಗಳ ಮೇಲೆ ದಾಳಿ ನಡೆಸಿರುವ ವರದಿಗಳು ಬಂದಿವೆ. ಒರಿಸ್ಸಾದ ಕಂಧಮಲ್‌ನಲ್ಲಿ ಸೋಮವಾರ ಮೃತದೇಹ ಒಂದು ಪತ್ತೆಯಾಗಿದ್ದು, ಮೃತರ ಸಂಖ್ಯೆ 24ಕ್ಕೇರಿದೆ.
ಮಂಗಳೂರಿನಲ್ಲಿ ದುಷ್ಕರ್ಮಿಗಳು ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ್ದಾರೆ. ಕೇರಳದ ಕಾಸರಗೋಡಿನಲ್ಲೂ ಮಿಶನರಿ ಶಾಲೆಯೊಂದರ ಮೇಲೆ ದಾಳಿ ಮಾಡಲಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾಸ್ಟರ್‌ಗಳ ಮೇಲೆ ದಾಳಿ ಮಾಡಲಾಗಿದ್ದು ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕ ಮತ್ತು ಒರಿಸ್ಸಾ ವಿರುದ್ಧ ಎಚ್ಚರಿಕೆ ನೀಡಿದೆ.
|