ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಇಂಧೋರಿನಲ್ಲಿ ಇನ್ನೋರ್ವ ಶೇರು ದಲ್ಲಾಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನು ಆತ್ಮಹತ್ಯೆ ಎಂದು ಇಂಧೋರ್ ಪೊಲೀಸರು ದೃಢಪಡಿಸದಿದ್ದರೂ, ಕೆಲವು ಹೂಡಿಕೆದಾರರು ತಮ್ಮ ಹಣವಾಪಸಾತಿ ಮಾಡಲು ಹೇಳಿರುವ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಶೇರುಮಾರುಕಟ್ಟೆಯ ಇತ್ತೀಚಿನ ತುಯ್ದಾಟದಿಂದಾಗಿ ರವಿ ಶರ್ಮಾ ಭಾರೀ ನಷ್ಟ ಅನುಭವಿಸಿದ್ದರು. ಅಮೆರಿಕದ ಲೆಹ್ಮಾನ್ ಬ್ರದರ್ಸ್ ಸಂಸ್ಥೆಯು ದಿವಾಳಿ ಅರ್ಜಿ ಸಲ್ಲಿಸಿದ್ದು ಎಐಜಿ ಸಂಸ್ಥೆಯೂ ನಷ್ಟದಲ್ಲಿರುವ ಕಾರಣ ಆರ್ಥಿಕ ರಂಗದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಮೃತ ರವಿ ಶರ್ಮಾ ಅವರ ಕಂಪ್ಯೂಟರ್ ಪರೀಕ್ಷಿಸಿದ ಬಳಿಕವಷ್ಟೆ ಹೆಚ್ಚಿನ ಮಾಹಿತಿಗಳು ತಿಳಿಯಬಹುದು ಎಂದು ಪೊಲೀಸರು ಹೇಳಿದ್ದಾರೆ.
ಅಮೆರಿಕವು ತೀವ್ರ ಆರ್ಥಿಕ ಹಿಂಜರಿತ ಅನುಭವಿಸುತ್ತಿದ್ದು, 1929ರಿಂದ ಇದು ಅತಿ ದೊಡ್ಡ ಕುಸಿತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
|