ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಹತರಾದ ಇಬ್ಬರು ಶಂಕಿತ ಉಗ್ರರು ಮತ್ತು ಸೆರೆಹಿಡಿಯಲಾದ ಉಗ್ರನೊಬ್ಬನ ಮೇಲೆ ಇದಕ್ಕಿಂತ ಮೊದಲು ಗಂಭೀರವಾದ ಯಾವುದೇ ಸಮಾಜಘಾತುಕ ಆರೋಪದ ಹಿನ್ನಲೆಯಿಲ್ಲವೆಂದು ಉತ್ತರ ಪ್ರದೇಶ ಪೋಲೀಸರು ಹೇಳಿಕೆ ನೀಡಿದ್ದಾರೆ.
ಅತೀಫ್ ಆಲಿಯಾಸ್ ಬಶೀರ್ ಮತ್ತು ಸಾಜಿದ್ ಹತರಾದ ಉಗ್ರರಾಗಿದ್ದಾರೆ. ಇದೇ ವೇಳೆ ಮೊಹಮ್ಮದ್ ಸೈಫ್ ಎಂಬಾತನನ್ನು ದೆಹಲಿ ಪೋಲೀಸರು ಎನ್‌ಕೌಂಟರ್ ಸಮಯದಲ್ಲಿ ಸೆರೆಹಿಡಿದಿದ್ದಾರೆ. ಈ ಮೂವರು ಅಜ್ಮಾಗರ್ ಜಿಲ್ಲೆಯ ಸಂಜನಾಪುರ್ ಸಮೀಪದ ಸಾರಾಮಿರ್ ಪ್ರದೇಶದ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಈ ಮೂವರ ಮೇಲೆ ಯಾವುದೇ ಅಪರಾಧಿ ಪ್ರಕರಣಗಳು ದಾಖಲಾಗಿಲ್ಲ ಎಂದು ರಾಜ್ಯ ಹೆಚ್ಚುವರಿ ಪೋಲೀಸ್ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಬ್ರಿಜ್ ಲಾಲ್ ತಿಳಿಸಿದ್ದಾರೆ.
''ಈ ವಿಷಯದ ಕುರಿತು ದೆಹಲಿ ಪೋಲೀಸರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ'' ಎಂದು ಅವರು ಹೇಳಿದರು.
ಅಜ್ಮಾಗರ್ ಜಿಲ್ಲೆಯ ಸಾರಾಮಿರ್ ಕ್ರಿಮಿನಲ್‌ಗಳಿಗೆ ಉತ್ತಮ ಅಡಗುತಾಣವಾಗಿದೆ ಅಲ್ಲದೆ, ಈ ಪ್ರದೇಶವನ್ನು ಮಿನಿ ದುಬೈ ಎಂದೂ ಕರೆಯಲಾಗುತ್ತದೆ.
ಭೂಗತ ದೊರೆ ಅಬುಸಲೇಂ ಮತ್ತು ಅಬು ಬಶರ್, ಅಹಮ್ಮದಾಬಾದ್ ಸ್ಫೋಟದ ಸಂಶಯಿತ ಆರೋಪಿ ಕೂಡಾ ಇದೇ ಪ್ರದೇಶದಿಂದ ಮೇಲೆ ಬಂದವರೆನ್ನಲಾಗುತ್ತಿದೆ.
ಇದೇ ವೇಳೆ ಬಂಧಿತ ಮೊಹಮ್ಮದ್ ಸೈಫ್‌ನ ತಂದೆ ಸದಾಬ್ ಅಹಮ್ಮದ್, ತನ್ನ ಪುತ್ರ ಉಗ್ರನೆಂದು ಸಾಬೀತಾದಲ್ಲಿ ಅವನನ್ನು ಕೊಲ್ಲಬೇಕೆಂಬ ಹೇಳಿಕೆ ನೀಡಿದ್ದಾರೆ.
|