ಒಂದೊಮ್ಮೆ ಉದ್ಯೋಗದಾತರು ತನ್ನ ನೌಕರರಿಗೆ ಸಂಬಳ ಪಾವತಿಯನ್ನು ತಡವಾಗಿ ಮಾಡಿದಲ್ಲಿ ಬಡ್ಡಿ ಸೇರಿಸಿ ಕೊಡಬೇಕು ಎಂದು ಬಾಂಬ್ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಅನೂಪ್ ಮೊಹ್ತಾ ಮತ್ತು ಸಿ.ಎಲ್.ಪಂಗಾರ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಸೇವಾ ಒಪ್ಪಂದಲ್ಲಿ ಬಡ್ಡಿಪಾವತಿಯ ಅವಕಾಶ ಇದೆಯೆ ಅಥವಾ ಇಲ್ಲವೇ ಎಂಬುದು ಇಲ್ಲಿ ಗೌಣ ಎಂದು ಹೇಳಿದೆ.
ಫಿರ್ಯಾದುದಾರ ಯುವರಾಜ್ ಎನ್ ರೊಡ್ಯೆ ಎಂಬವರು ಮಹಾರಾಷ್ಟ್ರ ವಿದ್ಯುತ್ ಮಂಡಳಿಯಲ್ಲಿ 1975ರಿಂದ ಕರ್ತವ್ಯ ನಿರತರಾಗಿದ್ದರು. 1989ರಲ್ಲಿ ರೊಡ್ಯೆ ಅವರಿಗೆ 1975ರಿಂದ ವೇತನ ಬಾಕಿ ಇತ್ತು. ನ್ಯಾಯೋಚಿತವಲ್ಲದ ಕಾರಣಕ್ಕಾಗಿ ಅವರ ಪಾವತಿ ವಿಳಂಬವಾಗಿದ್ದು, 1994ರಲ್ಲಿ ವೇತನಬಾಕಿಯನ್ನು ಪಡೆದುಕೊಳ್ಳಲು ಸೂಚಿಸಲಾಗಿತ್ತು. ಆವರು ವೇತನ ಮೊತ್ತವನ್ನು ಪಡೆದಿದ್ದು, ವಿಳಂಬಿತ ಅವಧಿಯ ಬಡ್ಡಿಗಾಗಿ ಅರ್ಜಿ ಸಲ್ಲಿಸಿದ್ದರು.
ಸೇವಾ ನಿಯಮದಲ್ಲಿ ಬಡ್ಡಿಪಾವತಿಗೆ ಅವಕಾಶವಿಲ್ಲ ಎಂಬ ನಿಯಮವನ್ನು ವಿದ್ಯುತ್ ಮಂಡಳಿಯು ತಳೆದಿತ್ತು. ಒಟ್ಟು ಪಾವತಿಗೆ ಶೇ.16ರ ದರದಲ್ಲಿ ಬಡ್ಡಿ ಪಾವತಿ ಮಾಡಬೇಕು ಎಂದು ಅವರು ನಾಗಪುರ ಪೀಠಕ್ಕೆ ಮನವಿ ಮಾಡಿದ್ದರು.
ಬಾಕಿ ಮೊತ್ತವನ್ನು ನಿರ್ಧರಿಸಲು ಅಷ್ಟು ದೀರ್ಘ ಸಮಯ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ ಎಂದು ಹೇಳಿರುವ ನ್ಯಾಯಪೀಠವು, ಫಿರ್ಯಾದುದಾರ ಬಡ್ಡಿ ಪಡೆಯಲು ಅರ್ಹ ಎಂಬ ತೀರ್ಪು ನೀಡಿದೆ.
ಪಾವತಿ ವಿಳಂಬವು ಉದ್ದೇಶಪೂರ್ವಕವಾಗಿ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ಇಲ್ಲಿ ಪರಿಗಣನೀಯವಲ್ಲ ಎಂದು ಹೇಳಿರುವ ನ್ಯಾಯಪೀಠ ಉದ್ಯೋಗದಾತರ ನಿಷ್ಕ್ರೀಯತೆಯಿಂದಾಗಿ ಉದ್ಯೋಗಿಯು ಬಾಧೆಪಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
|