ದೆಹಲಿ ಸ್ಫೋಟ ಶಂಕಿತರಾದ ಮೊಹ್ಮದ್ ಸೈಫ್ ಹಾಗೂ ಝೀಶಾನ್ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಒಂದು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾಮಿಯಾ ನಗರದಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್ ವೇಳೆ ಸೈಫ್ ಬಂಧನಕ್ಕೀಡಾಗಿದ್ದರೆ, ಝೀಶಾನ್ ಎಂಬಾತನನ್ನು ವಿಶೇಷ ಘಟಕವು ಕೇಂದ್ರ ದೆಹಲಿಯ ಜಂದೇವಾಲನ್ ಪ್ರದೇಶದಲ್ಲಿ ಬಂಧಿಸಿದ್ದರು.
ತನ್ನ ಸಹಚರ ಅತಿಕ್ ಅಲಿಯಾಸ್ ಬಶೀರ್ ಬಾಂಬ್ ಸ್ಫೋಟಗಳನ್ನು ರೂಪಿಸಿದ್ದ ಎಂಬುದಾಗಿ ಹೇಳಿದ್ದಾನೆ. ಕೇಂದ್ರೀಯ ದೆಹಲಿಯ ರೀಗಲ್ ಸಿನಿಮಾ ಹೊರಗಡೆ ಸೈಫ್ ಬಾಂಬ್ ಇರಿಸಿದ್ದ ಎಂದೂ ಮೂಲಗಳು ಹೇಳಿವೆ.
ಶುಕ್ರವಾರದ ಎನ್‌ಕೌಂಟರ್ ವೇಳೆ ಸಾವಿಗೀಡಾಗಿರುವ ಸಾಜಿದ್ ಮತ್ತು ಝೀಶಾನ್ ಅವರುಗಳು ಗ್ರೇಟರ್ ಕೈಲಾಸ್ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಿದ್ದರೆನ್ನಲಾಗಿದೆ.
ಸಾಜಿದ್ ಮತ್ತು ಅತಿಕ್ ಶುಕ್ರವಾರದ ಎನ್‌ಕೌಂಟರ್ ವೇಳೆ ಸಾವನ್ನಪ್ಪಿದ್ದಾರೆ. ಅತಿಕ್‌ನನ್ನು ಸಿಮಿ ಕಾರ್ಯಕರ್ತ ಅಬ್ದುಸ್ ಸುಭಾನ್ ಖುರೇಶಿ ಅಲಿಯಾಸ್ ತಕೀರ್‌ನ ಸಹಚರ ಎಂದು ಹೇಳಲಾಗಿದೆ.
ದೆಹಲಿ ಸರಣಿ ಸ್ಫೋಟದಲ್ಲಿ 10 ಮಂದಿ ಪಾಲ್ಗೊಂಡಿದ್ದಾರೆ ಎಂಬ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ. ಶುಕ್ರವಾರದ ಎನ್‌ಕೌಂಟರ್ ವೇಳೆ ಇಬ್ಬರು ಸತ್ತು ಮತ್ತಿಬ್ಬರು ಬಂಧನಕ್ಕೀಡಾಗಿದ್ದಾರೆ. ಉಳಿದ ಆರು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.
|