ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಚೈಡಿಂಗ್ ಎಂಬಲ್ಲಿ ಗೂಡ್ಸ್ ರೈಲಿನಿಂದ ಕಚ್ಚಾತೈಲವನ್ನು ಕದಿಯಲು ಯತ್ನಿಸಿದ ವೇಳೆ ವಿಷಾನಿಲ ಸೇವಿಸಿದ ಪರಿಣಾಮ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದರೆ, ಇತರ 40 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.
ಧಾನ್‌ಸಿರಿ ಮತ್ತು ರಂಗಪಹರ್ ನಡುವಿನ ಚೈಡಿಂಗ್ ಎಂಬಲ್ಲಿ ಸುಮಾರು 70 ಮಂದಿಯನ್ನೊಳಗೊಂಡಿದ್ದ ದುಷ್ಕರ್ಮಿಗಳ ತಂಡವು ಗೂಡ್ಸ್ ರೈಲನ್ನು ನಿಲ್ಲಿಸಿ ತೀವ್ರ ಸಾಂದ್ರತೆಯ ಎವಿಯೇಶನ್ ಟರ್ಬೈನ್ ಫ್ಯೂಯೆಲ್(ಎಟಿಎಫ್) ವ್ಯಾಗನ್ ಓಪನ್ ಮಾಡಲು ಆರಂಭಿಸಿದಾಗ, ಅದು ಸ್ಫೋಟಿಸಿ ಸ್ಥಳದಲ್ಲೇ 20ಕ್ಕಿಂತಲೂ ಅಧಿಕ ಮಂದಿ ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ಘಟನಾ ಸ್ಥಳದಿಂದ 20 ದೇಹಗಳನ್ನು ಪತ್ತೆ ಹಚ್ಚಲಾಗಿದೆ. ಕೆಲವು ದೇಹಗಳನ್ನು ಬೆಳಕು ಹರಿಯುವ ಮುನ್ನವೇ ಸ್ಥಳದಿಂದ ಒಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ಸಂಘಟಿಕ ದುಷ್ಕೃತ್ಯವಾಗಿದ್ದು ರೈಲ್ವೇ ಸಿಬ್ಬಂದಿಗಳೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಈ ಹಾದಿಯಾಗಿ ತೆರಳುವ ಗೂಡ್ಸ್ ರೈಲುಗಳಿಂದ ಕಚ್ಚಾ ತೈಲವನ್ನು ಕದಿಯುವ ಕೃತ್ಯ ಸುದೀರ್ಘ ಸಮಯದಿಂದ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಗೂಡ್ಸ್ ರೈಲು ಉತ್ತರ ಪ್ರದೇಶದ ಮುಗಲ್‌ಸಾರಾಯ್‌ಗೆ ತೆರಳುತ್ತಿತ್ತು.
|