ರಾಜಧಾನಿ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಇಂಡಿಯನ್ ಮುಜಾಹಿದೀನ್ ಉಗ್ರಗಾಮಿಗಳನ್ನು ಬಂಧಿಸಿರುವುದರೊಂದಿಗೆ, ನೆಹರೂ ಪ್ರದೇಶ ಸೇರಿದಂತೆ ದೆಹಲಿಯ 20 ಪ್ರಧಾನ ತಾಣಗಳಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ಅಂಶವನ್ನು ಪೊಲೀಸರು ಹೊರಗೆಡಹಿದ್ದಾರೆ.
ಅತ್ಯಧಿಕ ಸಂಖ್ಯೆಯಲ್ಲಿ ಬಹುಮಹಡಿ ಕಟ್ಟಡಗಳಿರುವ ನೆಹರೂ ಪ್ರದೇಶ ಸೇರಿದಂತೆ ಮತ್ತಿತರ ಕಡೆ ಬಾಂಬ್ ಸ್ಫೋಟಿಸಿ ಅಪಾರ ಸಾವು ನೋವು ಉಂಟುಮಾಡುವುದು ಉಗ್ರರ ಉದ್ದೇಶವಾಗಿತ್ತು ಎಂದು ಡಿಸಿಪಿ ಎಚ್.ಜಿ.ಎಸ್.ಧಲಿವಾಲ್ ಅವರು ತಿಳಿಸಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಬಣದ ಮುಖ್ಯ ವ್ಯಕ್ತಿ ಆತಿಫ್ ಸಹಿತ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿರುವ ಜಾಮಿಯಾ ನಗರ ಪ್ರದೇಶದಿಂದಲೇ ಭಾನುವಾರ ಬೆಳಿಗ್ಗೆ ಜಿಯಾ ಉರ್ ರಹಮಾನ್, ಶಕೀರ್ ನಿಶಾರ್ ಮತ್ತು ಮೊಹಮದ್ ಶಕೀಲ್ ಅವರನ್ನು ಬಂಧಿಸಲಾಗಿತ್ತು.
ಉಗ್ರಗಾಮಿಗಳು ವಾಸ್ತವ್ಯವಿದ್ದ ಬಾಟ್ಲಾ ಹೌಸ್‌ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಅಬ್ದುಲ್ ರಹಮಾನ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಗ್ರಗಾಮಿ ಜಿಯಾನ ತಂದೆಯಾಗಿರುವ ರಹಮಾನ್, ಈ ಮನೆಯ ಮಾಲೀಕನ ಸಹಿ ಫೋರ್ಜರಿ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಇದೇ ಮನೆಯಲ್ಲಿ ಎನ್‌ಕೌಂಟರ್ ನಡೆದಿತ್ತು.
ಶುಕ್ರವಾರ ಬಂಧಿತರಾಗಿದ್ದ ಮೊಹಮದ್ ಸೈಫ್ ಮತ್ತು ಜೀಶನ್ ಅವರನ್ನು ವಿಚಾರಣೆಗೊಳಪಡಿಸಿದಾಗ, ಕರೋಲ್‌ಬಾಗ್‌ನ ಗಫಾರ್ ಮಾರ್ಕೆಟ್‌ನಲ್ಲಿ ಬಾಂಬ್ ಇರಿಸಿದ್ದು ಶಕೀಲ್ ಎಂಬ ಅಂಶ ಹೊರಬಿದ್ದಿತ್ತು. ಅಲ್ಲದೆ ಜಿಯಾ ಮತ್ತು ಶಕೀಲ್ ಸೇರಿಕೊಂಡು ಜುಲೈ 26ರ ಅಹಮದಾಬಾದ್‌ನ ಮಣಿನಗರದಲ್ಲಿಯೂ ಬಾಂಬ್‌ಗಳನ್ನು ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
|