ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಧಾನಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಮಣಿಪಾಲಕ್ಕೆ ಆಗಮಿಸಿದ್ದು, ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮಣಿಪಾಲ್ ಯೂನಿರ್ವಸಿಟಿಯ ಸಿಕ್ಕಿಂನ ವಿದ್ಯಾರ್ಥಿಯೊಬ್ಬನನ್ನು ಪ್ರಕರಣದ ಕುರಿತು ವಿಚಾರಣೆಗೆ ಒಳಪಡಿಸಲಾಗಿತ್ತು. ಅಲ್ಲದೇ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಣಿಪಾಲದಲ್ಲಿನ ಎಲ್ಲಾ ಹೊಟೇಲ್, ವಸತಿಗೃಹಗಳನ್ನು ಕೂಲಂಕಷವಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಆದರೆ ಮುನ್ನೆಚ್ಚರಿಕೆಯ ಅಂಗವಾಗಿ ನಾವು ಯಾವುದೇ ಹೆಚ್ಚಿನ ವಿಷಯವನ್ನು ಬಹಿರಂಗಗೊಳಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಸಿಮಿ, ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗಳು ಕಾರಣವಾಗಿದ್ದು, ಇದಕ್ಕೆ ಲಷ್ಕರ್ ಎ ತೊಯ್ಬಾ ಆರ್ಥಿಕ ನೆರವು ನೀಡುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದರು.
ಅಲ್ಲದೇ ರಾಜಧಾನಿಯ ಸ್ಫೋಟ ಕೃತ್ಯಕ್ಕೆ ಕರ್ನಾಟಕದಿಂದಲೇ ಸ್ಫೋಟ ರವಾನೆಯಾಗಿತ್ತು ಎಂಬ ಆಘಾತಕಾರಿ ಅಂಶವನ್ನು ದೆಹಲಿ ಜಂಟಿ ಪೊಲೀಸ್ ಆಯುಕ್ತ ಕರ್ನೈಲ್ ಸಿಂಗ್ ಭಾನುವಾರ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವಿದ್ಯಾರ್ಥಿ ಹಾಗೂ ಎಸ್‌ಟಿಡಿ ಮಾಲಿಕನೋರ್ವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
|