ಇಲೆಕ್ಟ್ರಾನಿಕ್ ಬಿಡಿಭಾಗಗಳ ಕಂಪೆನಿಯೊಂದರ ವಜಾಗೊಂಡ ನೌಕರರು ಮತ್ತು ಆಡಳಿತ ಮಂಡಳಿ ವಿರುದ್ಧ ನಡೆದ ಘರ್ಷಣೆಯಲ್ಲಿ, ಪ್ರತಿಭಟನಾಕಾರರು ಕಂಪೆನಿಯ ಸಿಇಒನನ್ನೇ ಹೊಡೆದು ಕೊಂದಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ನಡೆದಿದೆ.
ಈ ಘಟನೆಯಲ್ಲಿ ಕಲ್ಲು ತೂರಾಟದಿಂದಾಗಿ ಸುಮಾರು 25ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದ ಉದ್ಯೋಗ್ ವಿಹಾರ್‌ನಲ್ಲಿನ ಗ್ರಾಜ್ನಿಯೋ ಸಿಇಒ ಎಲ್. ಕೆ .ಚೌಧರಿ ಎಂಬವರು ಪ್ರತಿಭಟನಾನಿರತ ಕಾರ್ಮಿಕರ ಕೋಪಕ್ಕೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಸಿಇಒ ಅವರನ್ನು ಕೆಲವು ದಿನಗಳ ಹಿಂದಷ್ಟೇ ಪದಚ್ಯುತಗೊಂಡಿದ್ದ ಪ್ರತಿಭಟನಾನಿರತ ನೌಕರರು ತಾಳ್ಮೆಕಳೆದುಕೊಂಡ ಪರಿಣಾಮ ಚೌಧರಿಯನ್ನು ಮನಬಂದಂತೆ ಹೊಡೆದಾಗ ಅವರು ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆರ್. ಕೆ. ಚತುರ್ವೇದಿ ತಿಳಿಸಿದ್ದಾರೆ.
ಘರ್ಷಣೆ ಸಂಭವಿಸುತ್ತಿದ್ದಂತೆ ಮುನ್ನೆಚ್ಚರಿಕೆ ಅಂಗವಾಗಿ ಕಾವಲು ಪಡೆ ಗಾಳಿಯಲ್ಲಿ ಗುಂಡು ಹಾರಿಸಿತು ಎಂದು ಚತುರ್ವೇದಿ ತಿಳಿಸಿದ್ದಾರೆ. ಈ ಘರ್ಷಣೆಯಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ಚೌಧರಿಯನ್ನು ಕೂಡಲೇ ಕೈಲಾಶ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಮಾರ್ಗ ಮಧ್ಯಯೇ ಸಾವನ್ನಪ್ಪಿದ್ದರು.
ಸರಿಯಾಗಿ ಕಾರ್ಯನಿರ್ವಹಿಸದ ಕೆಲವು ನೌಕರರನ್ನು ಕೆಲವು ದಿನಗಳ ಹಿಂದೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು. ಇದರಲ್ಲಿ ಖಾಯಂ ಮತ್ತು ಗುತ್ತಿಗೆ ಆಧಾರದ ನೌಕರರು ಸೇರಿದ್ದರು.ಈ ಬಗ್ಗೆ ಆಡಳಿತ ಮಂಡಳಿ ಮತ್ತು ನೌಕರರ ನಡುವೆ ಮಾತುಕತೆ ನಡೆದಿತ್ತಾದರೂ,ನೌಕರರು ಅಸಮಾಧಾನಗೊಂಡಿದ್ದರು.
ಇಂದು ಮತ್ತೆ ನೌಕರರ ಬಳಿ ಮಾತುಕತೆ ನಡೆಸಲು ಸಿಇಒ ಚೌಧುರಿ ತೆರಳಿದ್ದ ಸಂದರ್ಭ,ಪರಿಸ್ಥಿತಿ ವಿಕೋಪಕ್ಕೆ ಹೋಗಿ ಈ ದುರಂತಕ್ಕೆ ಕಾರಣವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
|