ವಿಶ್ವ ಸಂಸ್ಥೆಯ 63 ನೇ ಅಧಿವೇಶನದಲ್ಲಿ ಭಾಷಣ ಮಾಡಲಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚುತ್ತಿರುವ ಭಯೋತ್ಪಾದನೆ ಕುರಿತು ವಿಶ್ವ ನಾಯಕರ ಗಮನ ಸೆಳೆಯಲಿದ್ದಾರೆಂದು ತಿಳಿದು ಬಂದಿದೆ.
ಫ್ರಾನ್ಸ್ ಮತ್ತು ಯುಎಸ್ ಸೇರಿದಂತೆ ಎರಡು ರಾಷ್ಟ್ರಗಳ ಪ್ರವಾಸವೂ ಈ ಯಾತ್ರೆಯನ್ನೊಳಗೊಂಡಿದೆ.ಹತ್ತು ದಿನಗಳ ಈ ಪ್ರವಾಸ ಇಂದಿನಿಂದ ಪ್ರಾರಂಭವಾಗಲಿದೆ. ನಂತರ ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಅಣು ಒಪ್ಪಂದ ಸೇರಿದಂತೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಅಭಿವೃದ್ದಿ ಕುರಿತು ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ಜತೆ ಡಾ.ಸಿಂಗ್ ಮಾತುಕತೆ ನಡೆಸಲಿದ್ದಾರೆ.
ಪ್ರವಾಸಕ್ಕೆ ಹೊಗುವ ಮುನ್ನ ಮಾತನಾಡಿದ ಅವರು ವಿಶ್ವ ಸಂಸ್ಥೆಯಲ್ಲಿ ವಿಶ್ವ ಸಂಸ್ಥೆಯ ಮಹತ್ವ ಮತ್ತು ಬೌಗೋಳಿಕ ಸಮಸ್ಯೆಯಾಗಿರುವ ಭಯೋತ್ಪಾದನೆ, ಬರ, ಪ್ರವಾಹ, ಆಹಾರ ಕೊರತೆ ಮುಂತಾದ ಸವಾಲುಗಳನ್ನು ಎದುರಿಸಿ ಸಾರ್ವರ್ತಿಕ ಅಭಿವೃದ್ದಿಯಾಗುವತ್ತ ತಾನು ವಿಶ್ವ ನಾಯಕರ ಗಮನಸೆಳೆಯಲಿರುವುದಾಗಿ ಅವರು ಹೇಳಿದರು.
ಇಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರ ಕೋರಲು ಭಾರತ ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.
''ವಿಶ್ವದಲ್ಲಿ ಶಾಂತಿ, ಸ್ಥಿರತೆ ನೆಲೆಸುವಲ್ಲಿ ಮತ್ತು ಅಭಿವೃದ್ದಿಗೆ ವಿಶ್ವ ಸಂಸ್ಥೆಯ ಪ್ರಾಧಾನ್ಯತೆಯನ್ನು ಭಾರತ ಯಾವತ್ತೂ ಎತ್ತಿ ಹಿಡಿದಿದೆ'' ಎಂದು ಅವರು ಹೇಳಿದರು.
''ನನ್ನ ನ್ಯೂಯಾರ್ಕ್ ಯಾತ್ರೆಯ ಸಂದರ್ಭ ಅಮೆರಿಕಾ ಮಾತ್ರವಲ್ಲದೆ ಇತರೆ ಪ್ರವಾಸಿ ನಾಯಕರುಗಳಾದ ಚೈನಾ, ಇಟೆಲಿ, ನಮೀಬಿಯಾ, ಪಾಕಿಸ್ತಾನ ಮತ್ತು ಬ್ರಿಟನ್ ರಾಷ್ಟ್ರ ನಾಯಕರುಗಳೊಂದಿಗೂ ಮಾತುಕತೆ ನಡೆಸುತ್ತೇನೆ'' ಎಂದು ಅವರು ಭರವಸೆ ಇತ್ತರು.
ಇದಲ್ಲದೆ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಭಾರತ-ಅಮೆರಿಕಾ ಸಂಬಂಧ ವೃದ್ದಿಗೆ ಕಾರಣರಾದ ಎಲ್ಲರನ್ನೂ ಭೇಟಿಯಾಗುವುದಾಗಿ ಹೇಳಿದರು.ಅಲ್ಲದೆ ಬುಶ್ ಅವರ ಆಹ್ವಾನದಂತೆ ವಾಷಿಂಗ್ಟನ್‌ಗೂ ಭೇಟಿ ನೀಡುವುದಾಗಿ ತಿಳಿಸಿದರು.
''ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ಸಂಬಂಧವು ಶಿಕ್ಷಣ, ವ್ಯಾಪಾರ, ವಹಿವಾಟು, ತಂತ್ರಜ್ಞಾನ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಅಭಿವೃದ್ದಿಯಾಗಿದೆ. ಇದು ಎರಡೂ ದೇಶಗಳ ಸಂಬಂಧ ಸುಧಾರಣೆ ಮಾಡುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದೆ'' ಎಂದೂ ಅವರು ಹೇಳಿದರು.
|