ದೇಶಾದ್ಯಂತ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ತನಿಖೆಯನ್ನು ತೀವ್ರಗೊಳಿಸಿರುವ ದೆಹಲಿ ಮತ್ತು ಉತ್ತರಪ್ರದೇಶ ಪೊಲೀಸ್ ತಂಡ ಉತ್ತರಪ್ರದೇಶದ ಅಜಾಮ್‌ಗರ್‌ಗೆ ಮಂಗಳವಾರ ಭೇಟಿ ನೀಡಿ ತೀವ್ರ ಶೋಧಕಾರ್ಯಾಚರಣೆಗೆ ಇಳಿದಿದೆ.
ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಉಗ್ರರು ಹಾಗೂ ಸ್ಫೋಟ ಕಾರ್ಯದಲ್ಲಿ ಶಾಮೀಲಾದ ಎಲ್ಲಾ ಉಗ್ರರು ಉತ್ತರಪ್ರದೇಶ ಅಜಾಮ್‌ಗರ್ ಜಿಲ್ಲೆಯವರಾಗಿದ್ದು,ಆ ನಿಟ್ಟಿನಲ್ಲಿ ಇಲಾಖೆ ತೀವ್ರ ಶೋಧಕ್ಕೆ ಮುಂದಾಗಿರುವುದಾಗಿ ತಿಳಿಸಿದೆ.
ಅಜಾಮ್‌ಗರ್‌ನ ಗ್ರಾಮದ ಸಾನ್‌ಜಾರ್‌ಪುರ್‌ನಲ್ಲಿರುವ ಶಂಕಿತ ಉಗ್ರರಾದ ಸೈಫ್ ಮತ್ತು ಸಾಜಿದ್ ಮನೆಗಳ ಮೇಲೆ ದಾಳಿ ನಡೆಸಿ,ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಇಡೀ ಗ್ರಾಮದಾದ್ಯಂತ ವಿಶೇಷ ಬಂದೋಬಸ್ತ್ ಅನ್ನು ಏರ್ಪಡಿಸಿರುವುದಾಗಿಯೂ ಇಲಾಖೆ ತಿಳಿಸಿದೆ.
ಡಾ.ಫಾಕ್ರೆ ಅಲಾಂ, ಡಾ.ಜಾವೇದ್ ಮತ್ತು ಅವರ ಮಕ್ಕಳು, ಸಹೋದರ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ನಾಲ್ಕು ಯುವಕರ ಮನೆಗೆ ತೆರಳಿದ ತಂಡ ಪೋಟೋ, ಸಿಡಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಗ್ರಾಮದ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತನ ಮುಖವನ್ನು ಮುಚ್ಚಿರುವುದರಿಂದ ಪರಿಚಯ ಸಿಕ್ಕಿಲ್ಲ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
|