ದೆಹಲಿ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರ ಅತಿಫ್‌ನ ಬ್ಯಾಂಕ್ ಖಾತೆಯನ್ನು ಪತ್ತೆ ಹಚ್ಚುವಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಯಶಸ್ವಿಯಾಗಿದೆ.
ಕಳೆದ ಆರು ತಿಂಗಳಲ್ಲಿಯೇ ಅತಿಫ್ ಖಾತೆಯಲ್ಲಿ ಸುಮಾರು 3ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ದಕ್ಷಿಣ ದೆಹಲಿಯ ಜಾಮಿಯ ಬಹುಮಹಡಿ ಕಟ್ಟಡದಲ್ಲಿ ಅಡಗಿದ್ದ ಉಗ್ರರೊಂದಿಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಉಗ್ರ ಅತಿಫ್ ಹಾಗೂ ಸಾಜಿದ್ ಸಾವನ್ನಪ್ಪಿದ್ದರು. ಇಬ್ಬರು ಉಗ್ರರು ಪರಾರಿಯಾಗಿದ್ದರು.
ದೆಹಲಿ ಮತ್ತು ಉತ್ತರಪ್ರದೇಶದ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯ ಮೂಲಕ ಒಟ್ಟು ಐದು ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಮೂರು ಖಾತೆ ಅತಿಫ್‌ಗೆ ಸೇರಿದ್ದರೆ,ಎರಡು ಖಾತೆ ಸೈಫ್ ಸೇರಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಶಂಕಿತ ಉಗ್ರರಾದ ಅತಿಫ್ ಮತ್ತು ಸೈಫ್ ಕೆಲವೇ ದಿನಗಳ ಹಿಂದಷ್ಟೇ ತಮ್ಮ ಬ್ಯಾಂಕ್ ಖಾತೆಯನ್ನು ತೆರೆದಿರುವುದಾಗಿ ಪೊಲೀಸ್ ವರದಿ ತಿಳಿಸಿದೆ.
ಅವರು ತಮ್ಮ ಖಾತೆಯನ್ನು ಹವಾಲ ಹಣ ಲೇವಾದೇವಿ ನಡೆಸಲು ಬಳಸುತ್ತಿದ್ದಿರಬಹುದಾಗಿ ಪೊಲೀಸರು ಶಂಕಿಸಿದ್ದಾರೆ. ಏತನ್ಮಧ್ಯೆ ಉಗ್ರರು ಮತ್ತು ಮಾದಕ ವಸ್ತು ಕಳ್ಳಸಾಗಣಿಕೆದಾರರ ನಡುವೆ ಯಾವುದಾದರು ಸಂಬಂಧ ಇದೆಯಾ ಎಂಬ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ಭಯೋತ್ಪಾದಕರಿಗೆ ಹಣ ಸಂಪಾದನೆಗೆ ದಂಧೆಯಾಗಿರುವುದರಿಂದ ಈ ಕುರಿತು ಹೆಚ್ಚಿನ ತನಿಖೆಗೆ ಮುಂದಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
|