ದೆಹಲಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರರಾದ ಮೊಹಮ್ಮದ್ ಸೈಫ್ ಹಾಗೂ ಬಂಧಿತ ಉಗ್ರರಿಗೆ ದುಬೈ ಮತ್ತು ಹವಾಲ ವಹಿವಾಟಿನ ನಂಟಿದೆ ಎಂದು ಮಂಗಳವಾರ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಅಲ್ಲದೇ ರಾಜಧಾನಿಯಲ್ಲಿ ಸರಣಿ ಬಾಂಬ್ ಸ್ಫೋಟದ ಕುರಿತು ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು,ಶಂಕಿತ ಉಗ್ರಗಾಮಿಗಳಿಗೂ ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನ ಜೊತೆ ಸಂಬಂಧ ಇರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ ಸೈಫ್ ಹಾಗೂ ಬಂಧಿತ ಉಗ್ರರಿಗೆ ದುಬೈಯೊಂದಿಗೆ ಸಂಪರ್ಕ ಇರುವುದಾಗಿ ಗುಪ್ತಚರ ಇಲಾಖೆ ಮತ್ತು ಭದ್ರತಾ ಏಜೆನ್ಸಿ ಅಧಿಕಾರಿಗಳು ಗಂಭೀರವಾಗಿ ಆರೋಪಿಸಿದ್ದಾರೆ.
ಅವರೆಲ್ಲ ದುಬೈ ಸಂಬಂಧದೊಂದಿಗೆ ಹವಾಲ ವಹಿವಾಟಿನ ಜಾಲದಲ್ಲಿ ಸಕ್ರಿಯವಾಗಿ ಪಾಲ್ಗೂಂಡಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿದೆ.ಆ ನಿಟ್ಟಿನಲ್ಲಿ ಹವಾಲ ಜಾಲದ ಬಗ್ಗೆ ಕೂಲಂಕಷ ತನಿಖೆಗೆ ಮುಂದಾಗಿರುವುದಾಗಿ ತಿಳಿಸಿದೆ.
ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದಾವೂದ್ ಇಬ್ರಾಹಿಂನಿಗೆ ಉತ್ತರಪ್ರದೇಶದ ಅಜಾಮ್‌ಗರ್‌ನೊಂದಿಗೂ ಸಂಬಂಧ ಇದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
|