ದೇಶದಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಲು ಕಠಿಣ ಕಾನೂನಿನ ಅಗತ್ಯ ಇರುವುದಾಗಿ ಒತ್ತಿ ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ,ಆದರೆ ಮತ್ತೆ ಫೋಟಾವನ್ನು ಮರು ಜಾರಿಗೆ ತರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರು ಪಂಜಾಬ್ ಪ್ರದೇಶದಾದ್ಯಂತ ಬುಧವಾರ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಫೋಟಾದಂತಹ ಕಠಿಣ ಕಾನೂನುನನ್ನು ಜಾರಿಗೊಳಿಸುವಲ್ಲಿ ಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೇ ರಾಜಕೀಯವಾಗಿಯೂ ಭಯೋತ್ಪಾದನೆ ವಿರುದ್ಧ ಕಠಿಣ ಕಾಯ್ದೆಯನ್ನು ತರುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಬಲವಾದ ಇಚ್ಛೆ ಹೊಂದಿರುವುದಾಗಿ ಹೇಳಿದರು.
ಆದರೆ ಫೋಟಾ ಕಾಯ್ದೆ ಯಾಕೆ ವಿಫಲವಾಯಿತು ಎಂಬುದಾಗಿ ಗಂಭೀರವಾಗಿ ಪ್ರಶ್ನಿಸಿದ ಅವರು, ಸಂಸತ್ ಭವನದ ಮೇಲಿನ ದಾಳಿ ಮತ್ತು ಕಂಧಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಆಡಳಿತದಲ್ಲಿ ಇದ್ದವರು ಯಾರು ಎಂದು ತಿರುಗೇಟು ನೀಡಿದ್ದಾರೆ.ಅಲ್ಲದೇ ಫೋಟಾ ಕಾಯ್ದೆ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿದೆ ಎಂದರು.
ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ನೀವು ಪ್ರಧಾನಮಂತ್ರಿ ಅಭ್ಯರ್ಥಿತನದ ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಮನಮೋಹನ್ ಸಿಂಗ್ ಅವರೇ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ, ಅವರೊಬ್ಬ ಕೇವಲ ಅಭ್ಯರ್ಥಿಯಲ್ಲ, ಅವರು ವರ್ಚಸ್ವಿ ನಾಯಕರಾಗಿದ್ದಾರೆ ಎಂದು ರಾಹುಲ್ ಹೇಳಿದರು.
|