ಗ್ರೇಟರ್ ನೋಯ್ಡಾದಲ್ಲಿನ ಇಟಲಿ ಮೂಲದ ಕಂಪೆನಿಯೊಂದರ ಸಿಇಒ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಬುಧವಾರ ಕ್ಷಮಾಪಣೆ ಕೇಳಿದ್ದಾರೆ.
ನೋಯ್ಡಾದಲ್ಲಿ ಕಂಪೆನಿಯ ಮಾಜಿ ಉದ್ಯೋಗಿಗಳಿಂದಲೇ ಹತ್ಯೆಗೊಳಗಾದ ಎಲ್.ಕೆ.ಚೌಧುರಿ ಪ್ರಕರಣದ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ಕಂಪೆನಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿಕೆ ನೀಡಿದ್ದರು.
ಹತ್ಯೆ ಘಟನೆ ಕುರಿತು ಮಂಗಳವಾರ ಹೇಳಿಕೆ ನೀಡಿದ್ದ ಆಸ್ಕರ್, ಕಾರ್ಮಿಕರೊಂದಿಗಿನ ವಿವಾದ ಇತ್ಯರ್ಥಕ್ಕೆ ಕಂಪೆನಿ ಮುಂದಾಗದೇ ಇದ್ದಿದ್ದೇ ಹತ್ಯೆ ನಡೆಯಲು ಕಾರಣ,ಇಂತಹ ಘಟನೆಗಳು ಕಂಪೆನಿಗಳು ಕಾರ್ಮಿಕರಿಗೆ ಪರಿಹಾರ ಕೊಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ತಿಳಿಸಿದ್ದರು.
ಸಿಇಒ ಹತ್ಯೆಗೆ ಸಂಬಂಧಿಸಿದಂತೆ ಯಾರಿಗಾದರು ನೋವಾಗಿದ್ದರೂ ತಾನು ಕ್ಷಮಾಪಣೆ ಕೇಳುವುದಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದ ಅವರು ತನ್ನದು ತಪ್ಪಾಗಿದೆ ಎಂದು ಹೇಳುವ ಮೂಲಕ ಈ ವಿವಾದವನ್ನು ಅಂತ್ಯಗೊಳಿಸಿರುವುದಾಗಿ ಹೇಳಿದರು.
ಸಚಿವ ಆಸ್ಕರ್ ಈ ಹೇಳಿಕೆಗೆ ಕಂಪೆನಿ ಸೇರಿದಂತೆ ಉದ್ಯಮ ವಲಯ ಆಚ್ಚರಿ ವ್ಯಕ್ತಪಡಿಸಿ, ಇಂತಹ ಹೇಳಿಕೆ ಬೇಜವಾಬ್ದಾರಿತನದ್ದು, ಈ ಬಗ್ಗೆ ಸಚಿವರು ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದ್ದವು.
|