ದೆಹಲಿ ಮತ್ತು ಅಹಮದಾಬಾದ್‌ಗಳಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ 5ಮಂದಿ ಸದಸ್ಯರನ್ನು ಬುಧವಾರ ಸೆರೆ ಹಿಡಿದಿರುವುದಾಗಿ ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಐದು ಮಂದಿ ಶಂಕಿತ ಉಗ್ರರು ದೇಶದಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಸಂಬಂಧಪಟ್ಟವರಾಗಿರುವುದಾಗಿ ಅವರು ಹೇಳಿದ್ದು, ಅಲ್ಲದೇ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಪಾಕಿಸ್ತಾನದ ನಿಯಂತ್ರಣದಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ 2005ರಲ್ಲಿ ನಡೆದ ಸ್ಫೋಟ ಸೇರಿದಂತೆ 2006ರ ಮುಂಬೈ ಟ್ರೈನ್ ಬ್ಲಾಸ್ಟ್, ಜುಲೈ 29ರಂದು ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಾಗೂ ದೆಹಲಿಯಲ್ಲಿ ಸೆ.23ರಂದು ನಡೆದ ಸ್ಫೋಟ ಸೇರಿದಂತೆ ದೇಶಾದ್ಯಂತ ನಡೆದ ಎಲ್ಲಾ ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ಮುಂಬೈ ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮರಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಮೊಹಮ್ಮದ್ ಸಾದಿಕ್ ಶೇಕ್, ಅಫ್ಜಲ್ ಉಸ್ಮಾನಿ, ಮೊಹಮ್ಮದ್ ಸಾಕಿಬ್, ಮೊಹಮ್ಮದ್ ಅರಿಫ್ ಮತ್ತು ಶೇಕ್ ಅನ್ಸಾರ್ ಸೇರಿದಂತೆ ಐದು ಮಂದಿಯನ್ನು ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಬಂಧಿಸಿರುವುದಾಗಿ ಹೇಳಿದರು.
ಬಂಧಿತರೆಲ್ಲರೂ ಉತ್ತರಪ್ರದೇಶದ ಅಜಾಮ್‌ಗರ್‌ಗೆ ಸೇರಿದವರಾಗಿದ್ದಾರೆ. ಇವರಿಂದ ಭಾರೀ ಪ್ರಮಾಣದ ಸ್ಫೋಟಕ, ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.
ಬಂಧಿತ ಉಗ್ರರೆಲ್ಲರೂ ಭಯೋತ್ಪಾದನಾ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದಾರೆ. ಉಗ್ರರ ಮುಂದಿನ ದಾಳಿಯ ಗುರಿ ಮುಂಬೈ ಆಗಿತ್ತು ಎಂದು ತಿಳಿಸಿದರು.
|