ದೆಹಲಿ ಸರಣಿ ಬಾಂಬ್ ಸ್ಫೋಟ ಘಟನೆ ಸಂಭವಿಸಿದ ಬೆನ್ನಲ್ಲೇ ಇದೀಗ ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಾಲಯವನ್ನು ಸ್ಫೋಟಿಸುವುದಾಗಿ ಲಷ್ಕರ್ ಎ ತೊಯ್ಬಾ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.
ಬುಧವಾರವಷ್ಟೇ ಮುಂಬೈ ಪೊಲೀಸರು ಸ್ಫೋಟದ ಪ್ರಕರಣದ ಪ್ರಮುಖ ರೂವಾರಿಗಳಾದ ಇಂಡಿಯನ್ ಮುಜಾಹಿದ್ದೀನ್‌ನ ಐವರನ್ನು ಬಂಧಿಸಿದ್ದು,ಇದರೊಂದಿಗೆ ದೇಶಾದ್ಯಂತ ಸಂಭವಿಸಿದ ಎಲ್ಲಾ ಸ್ಫೋಟ ಕೃತ್ಯಗಳ ಸಂಚುಕೋರರನ್ನು ಸೆರೆಹಿಡಿದಂತಾಗಿದೆ ಎಂಬುದಾಗಿ ಹೇಳಿದ್ದರು.
ಇದೀಗ ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಗುಪ್ತ ಸಂದೇಶವೊಂದು ಬಂದಿದ್ದು,ಆ ಪ್ರಕಾರ ಪ್ರಸಿದ್ಧ ಮಧುರೈ ಮೀನಾಕ್ಷಿ ಸೇರಿದಂತೆ ಐತಿಹಾಸಿಕ ದೇವಾಲಯಗಳನ್ನು ಸ್ಫೋಟಿಸುವುದಾಗಿ ಲಷ್ಕರ್ ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿರುವುದಾಗಿ ಮುನ್ನಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕರುಣಾನಿಧಿಯವರು ಗುರುವಾರ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದು,ರಾಜ್ಯಾದ್ಯಂತ ಹೈ ಅಲರ್ಟ್‌ಗೆ ಆದೇಶಿಸಿದ್ದು,ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲು ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
|