ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣದಲ್ಲಿ ಅತ್ಯಂತ ಅಪರೂಪದ ತೀರ್ಪೊಂದು ಹೊರಬಿದ್ದಿದ್ದು, ಮದ್ಯ ಸೇವಿಸಿ ಡ್ರೈವಿಂಗ್ ಮಾಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೋಷಮುಕ್ತಗೊಳಿಸಿ ಸೆಶನ್ಸ್ ನ್ಯಾಯಾಲಯವೊಂದು ತೀರ್ಪು ನೀಡಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇದು ಮೊದಲ ಖುಲಾಸೆ ಪ್ರಕರಣವಾಗಿದೆ. ರೋಹನ್ ನಿಕಾಮ್ (21) ಎಂಬ ಯುವಕನನ್ನು ಖುಲಾಸೆಗೊಳಿಸಿರುವ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಆರ್.ಜಿ.ಅವಚಾತ್, ದಂಡವನ್ನು ಮರಳಿಸುವಂತೆ ಟ್ರಾಫಿಕ್ ಪೊಲೀಸರಿಗೆ ಆದೇಶಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ತಪ್ಪಿತಸ್ಥ ಎಂದು ನೀಡಿದ ತೀರ್ಪು ಪ್ರಶ್ನಿಸಿ ನಿಕಾಮ್ ಸೆಶನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಉಸಿರಾಟ ವಿಶ್ಲೇಷಣಾ ಯಂತ್ರ (ಬ್ರೆತ್ ಅನಲೈಸರ್) ಆಧಾರದಲ್ಲಿ ಮ್ಯಾಜಿಸ್ಟ್ರೇಟರು ಶಿಕ್ಷೆ ಘೋಷಿಸಿದ್ದರು. ಆದರೆ ತನ್ನನ್ನು ರಕ್ತ ಪರೀಕ್ಷೆಗೂ ಒಳಪಡಿಸಲಾಗಿದ್ದು, ಅದರ ವರದಿಯನ್ನು ನ್ಯಾಯಾಲಯ ಪರಿಗಣಿಸಿಲ್ಲ ಎಂದು ನಿಕಾಮ್ ವಾದಿಸಿದ್ದರು.
ಅಲ್ಲದೆ, ಆರೋಪಪಟ್ಟಿಯ ಪ್ರತಿಯನ್ನೂ ಆರೋಪಿಗೆ ಟ್ರಾಫಿಕ್ ಪೊಲೀಸರು ನೀಡಿಲ್ಲ. ಆರೋಪ ಪಟ್ಟಿಯಿಲ್ಲದೆಯೇ ಶಿಕ್ಷೆ ವಿಧಿಸಿವುದು ಹೇಗೆ ಸಾಧ್ಯ ಎಂದು ನಿಕಾಮ್ ಪರ ವಕೀಲ ರಾಜಾ ಠಾಕೂರ್ ಪ್ರಶ್ನಿಸಿದ್ದಾರೆ.
ಕಳೆದ ಫೆಬ್ರವರಿ 14ರಂದು ಪಾರ್ಟಿಯಿಂದ ಮರಳುತ್ತಿದ್ದ ನಿಕಾಮ್ ಅವರನ್ನು ಪೊಲೀಸರು ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಲ್ಲಿ ಬಂಧಿಸಿದ್ದರು ಮತ್ತು ಅವರಿಗೆ 3000 ರೂ. ದಂಡ ವಿಧಿಸಲಾಗಿತ್ತು. ಅವರಿಗೆ ನಾಲ್ಕು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಮತ್ತು 1000 ರೂ.ಗಳ ಜಾಮೀನು ನೀಡಲಾಗಿತ್ತು. ಈ ವರ್ಷದ ಜನವರಿ ತಿಂಗಳಿಂದೀಚೆಗೆ ಮುಂಬಯಿಯಲ್ಲಿ ಕುಡಿದು ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9296 ಪ್ರಕರಣಗಳು ದಾಖಲಾಗಿದ್ದವು.
|