ಭಾರತೀಯ ಜನತಾಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಸೆಪ್ಟೆಂಬರ್ 29ಕ್ಕೆ ಶಿಲ್ಲಾಂಗ್‌ಗೆ ಆಗಮಿಸಿದ ವೇಳೆ ಅವರನ್ನು ಹತ್ಯೆಗೈಯಲಾಗುವುದು ಎಂದು ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಇ-ಮೇಲ್ ಬೆದರಿಕೆ ಸಂದೇಶ ಕಳುಹಿಸಿದೆ.
ಬುಧವಾರ ರಾತ್ರಿ ಹರುಕುಮುರುಕ ಇಂಗ್ಲಿಷ್‌ನಲ್ಲಿ ಬರೆದ ಬೆದರಿಕೆಯ ಇ-ಮೇಲ್ ಸಂದೇಶವನ್ನು ಕೆಲವು ಸುದ್ದಿಸಂಸ್ಥೆಗಳಿಗೆ ರವಾನಿಸಲಾಗಿತ್ತು.
ಈಶಾನ್ಯ ಪ್ರಾಂತ್ಯದ ಇಂಡಿಯನ್ ಮುಜಾಹಿದ್ದೀನ್ ಕಮಾಂಡರ್ ಅಲಿ ಹುಸೈನ್ ಬಾದ್ರ್ ಮುದ್ರಿತ ಹೆಸರಿನಲ್ಲಿರುವ ಇ-ಮೇಲ್‌ನಲ್ಲಿ,ಹಿಂದುತ್ವದ ಮೂಲಕ ಫ್ಯಾಸಿಸ್ಟ್ ಅನ್ನು ಆಡ್ವಾಣಿ ಹುಟ್ಟುಹಾಕುತ್ತಿರುವುದಾಗಿ ದೂರಿದೆ.
ಆಡ್ವಾಣಿ ಹತ್ಯೆ ಬೆದರಿಕೆ ಇ-ಮೇಲ್ ಸಂದೇಶದ ನಂತರ ಮುಖ್ಯಮಂತ್ರಿ ಡೊಂಕುಪಾರ್ ರಾಯ್ ಜತೆ ಹಿರಿಯ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದರು.
ಇ-ಮೇಲ್ ಸಂದೇಶ ಬಂದ ಸುದ್ದಿಸಂಸ್ಥೆಗಳಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು,ಅದನ್ನು ಪರಿಶೀಲಿಸಿ ಓದಿರುವುದಾಗಿ ತಿಳಿಸಿದರು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ ಅಧಿಕಾರಿಗಳು,ನಾವು ಐಪಿ ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
|