ಕೋಮುದಳ್ಳುರಿಗೆ ಕಾರಣವಾದ ಗೋದ್ರಾ ರೈಲು ಬೆಂಕಿ ಪ್ರಕರಣದ ನಾನಾವತಿ ಆಯೋಗದ ತನಿಖಾ ವರದಿ ಗುರುವಾರ ಗುಜರಾತ್ ಅಸೆಂಬ್ಲಿ ಮುಂದೆ ಬರುವ ಮೂಲಕ ಪ್ರಕರಣದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕ್ಲಿನ್ ಚಿಟ್ ನೀಡಲಾಗಿದೆ.
2002ರ ಫೆಬ್ರುವರಿ 27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಕೋಚ್ ಬೆಂಕಿಗಾಹುತಿಯಾಗಿದ್ದು 59ಕರಸೇವಕರು ಜೀವಂತ ದಹನವಾಗಿದ್ದರು. ಇದೊಂದು ವ್ಯವಸ್ಥಿತ ಸಂಚು ವಿನಃ ಆಕಸ್ಮಿಕ ಘಟನೆ ಅಲ್ಲ ಎಂಬುದಾಗಿ ನಾನಾವತಿ ವರದಿ ಬಹಿರಂಗಗೊಳಿಸಿದೆ.
ಸಾಬರ್‌ಮತಿ ಎಕ್ಸ್‌ಪ್ರೆಸ್ ಪ್ರಕರಣದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯಾಗಲಿ,ಸಚಿವರಾಗಲಿ ಭಾಗಿಯಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ವರದಿ ಪ್ರಥಮ ಸಂಪುಟದಲ್ಲಿ ನಾನಾವತಿ ಆಯೋಗ ತಿಳಿಸಿದ್ದು,ಇದರಲ್ಲಿ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ.
ಅಲ್ಲದೇ ಸಂಚಿನ ಭಾಗವೆಂಬಂತೆ ರೈಲ್ವೆ ಬೋಗಿಗೆ ಬೆಂಕಿ ಹಚ್ಚಲು ಸುಮಾರು 140ಲೀಟರ್ ಪೆಟ್ರೋಲ್ ಅನ್ನು ಖರೀದಿಸಲಾಗಿತ್ತು ಎಂಬ ಅಂಶವನ್ನೂ ಆಯೋಗ ಬಿಚ್ಚಿಟ್ಟಿದೆ.
ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗೆ ಬೆಂಕಿ ಹಚ್ಚುವ ಸಲುವಾಗಿಯೇ ರಾಜಾ ಕುರ್‌ಕುರ್ ಮತ್ತು ಸಲೀಂ ಪಾನ್‌ವಾಲಾ ಎಂಬಿಬ್ಬರು ಫೆಬ್ರುವರಿ 26ರ ರಾತ್ರಿ ಪೆಟ್ರೋಲ್ ಖರೀದಿಸಿರುವುದಾಗಿ ವರದಿ ತಿಳಿಸಿದೆ. ಅಮಾನ್ ಗೆಸ್ಟ್ ಹೌಸ್‌ನಲ್ಲಿ ಸಂಚಿನ ರೂಪುರೇಶೆಯ ಕುರಿತು ಚರ್ಚೆ ನಡೆಸಲಾಗಿತ್ತು,ಬಳಿಕ ಕೋಮುದಳ್ಳುರಿ ರಾಜ್ಯಾದ್ಯಂತ ಪಸರಿಸಿರುವುದಾಗಿ ನಾನಾವತಿ ಹೇಳಿದೆ.
ಸಾಬರ್‌ಮತಿ ಎಕ್ಸ್‌ಪ್ರೆಸ್‌ನ ಎಸ್-6ಮತ್ತು ಎಸ್-7ಬೋಗಿಗಳನ್ನು ಬಲವಂತವಾಗಿ ತೆರೆಯಲಾಗಿದ್ದು,ಹಸನ್ ಲಾಲು ಎಂಬಾತ ಬೋಗಿ ಒಳಗಿನಿಂದ ಬೆಂಕಿ ಹಚ್ಚಿದ್ದು,ಈ ಇಡೀ ಸಂಚಿನ ರೂವಾರಿ ಮೌಲ್ವಿ ಉಮ್‌ರಾಜ್ ಎಂದು ಆಯೋಗ ಗಂಭೀರವಾರಿ ಆರೋಪಿಸಿದೆ. ಅಲ್ಲದೇ ಈ ಪಿತೂರಿಯಲ್ಲಿ ಶೌಕತ್ ಲಾಲು,ಇಮ್ರಾನ್ ಶೆರಿ,ರಫಿಕ್ ಬಾಟುಕ್,ಸಲೀಂ ಜಾರ್ದಾ,ಶೆರಾಜ್ ಬಾಲಾ ಸೇರಿರುವುದಾಗಿ ತಿಳಿಸಿದೆ.
ಸಾಬರ್‌ಮತಿ ಎಕ್ಸ್‌ಪ್ರೆಸ್ ದುರಂತದ ನಾನಾವತಿ ಆಯೋಗದ ಮೊದಲ ಭಾಗ ಇಂದು ಅಸೆಂಬ್ಲಿಯಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ವಿಧಾನಸಭೆಯಿಂದ ಹೊರನಡೆದಿದ್ದರು.
ಯುಸಿ ಬ್ಯಾನರ್ಜಿ ಆಯೋಗದ ಮುಖ್ಯಾಂಶ:
ಬೋಗಿಗೆ ಬೆಂಕಿ ಹತ್ತಿದ್ದು ಆಕಸ್ಮಿಕ ವಿನಃ ಉದ್ದೇಶಪೂರ್ವಕವಲ್ಲ.
ಬೋಗಿಗೆ ಹೊರಗಿನವರು ಬೆಂಕಿ ಹಚ್ಚಿದ್ದಾರೆಂಬ ವಾದ ಸರಿಯಲ್ಲ.
ಬೋಗಿಯೊಳಗೆ ಕರಸೇವಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ರೈಲಿನ ಎಲ್ಲಾ ಬೋಗಿಯ ಬಾಗಿಲುಗಳನ್ನು ಬಂದ್ ಮಾಡಲಾಗಿತ್ತು ಎಂಬುದು ತಪ್ಪು ಗ್ರಹಿಕೆ.
ಕರಸೇವಕರು ಯಾವಾಗ ಬರುತ್ತಾರೆಂಬ ಮಾಹಿತಿ ಗುಪ್ತಚರ ಇಲಾಖೆಗೆ ತಿಳಿದಿಲ್ಲವಾಗಿತ್ತು.
|