ಮರಾಠಿಯಲ್ಲಿಯೇ ನಾಮಫಲಕವನ್ನು ಹಾಕಬೇಕೆಂಬ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಹರಿಹಾಯ್ದಿರುವ ರಾಜ್ ಠಾಕ್ರೆ,ಭಯೋತ್ಪಾದಕ ಎಂಬ ಶಬ್ದಕ್ಕೆ ನ್ಯಾಯಾಲಯ ಸರಿಯಾದ ಅರ್ಥವಿವರಣೆಯನ್ನು ನೀಡಲಿ ಎಂದು ಶನಿವಾರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಘಟಕ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಮಾರ್ಗದರ್ಶಿ ಕಾರ್ಯಕ್ರಮವೊಂದರಲ್ಲಿ ಶನಿವಾರ ಭಾಗವಹಿಸಿದ್ದ ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ, ನಾವು ಕಾನೂನು ಸಮ್ಮತವಾಗಿಯೇ ಮರಾಠಿಯಲ್ಲಿಯೇ ನಾಮಫಲಕ ಅಳವಡಿಸಲು ಅಂಗಡಿ ಮಾಲಿಕರಿಗೆ ಒತ್ತಡ ಹೇರಿದ್ದೇವು.
ಆದರೆ ನ್ಯಾಯಾಲಯ ರಾಜ್ಯ ಸರ್ಕಾರ ನನ್ನ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿ, ಭಯೋತ್ಪಾದಕ ಎಂದು ಜರೆದಿರುವುದಾಗಿ ಹೇಳಿದರು.
ಹಾಗಾದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಉಪವಾಸ ಅಥವಾ ಮೌನ ಸತ್ಯಾಗ್ರಹ ಮಾಡುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭಯೋತ್ಪಾದಕರಾದಂತೆಯೇ ಎಂಬುದಾಗಿ ಠಾಕ್ರೆ ಪ್ರಶ್ನಿಸಿದ್ದಾರೆ.
ಮರಾಠಿಗರ ಹೆಸರಿನಲ್ಲಿ, ಮರಾಠಿ ನಾಮಫಲಕ ಕುರಿತು ಪ್ರಚೋದನಾಕಾರಿ ಭಾಷಣ ಮಾಡುತ್ತ ಕಾನೂನನ್ನು ಕೈಗೆತ್ತಿಕೊಂಡ ಮಹಾರಾಷ್ಟ್ರ ನವನಿರ್ಮಾಣ್ ಸೇನೆ (ಎಂಎನ್‌ಎಸ್)ಯ ವರಿಷ್ಠ ರಾಜ್ ಠಾಕ್ರೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳದ ಮಹಾರಾಷ್ಟ್ರ ಸರ್ಕಾರಕ್ಕೆ ಗುರುವಾರ ಬೊಂಬಾಯ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಮರಾಠಿ ಹೆಸರಿನಲ್ಲಿ ಗೂಂಡಾಗಳಂತೆ , ಭಯೋತ್ಪಾದಕರಂತೆ ವರ್ತಿಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಎಲ್ಲಾ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.
|