ಪ್ರಾಮಾಣಿಕತೆಯೇ ಈ ಬಾಲಕನಿಗೆ ಮುಳುವಾಯಿತು. ಶನಿವಾರ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಲಿಯಾದ ಸಂತೋಷ್ ಕುಮಾರ್ (13) ಎಂಬ ಬಾಲಕನ ದಯನೀಯ ವಿಚಾರವಿದು.
ಬೈಕಿನಲ್ಲಿ ಬಂದಿದ್ದ ಇಬ್ಬರಿಂದ ಕೆಳಗೆ ಬಿದ್ದ ಪೊಟ್ಟಣವೊಂದನ್ನು ಅವರಿಗೆ ಹಿಂತಿರುಗಿಸಲೆಂದು ಎತ್ತಿಕೊಂಡದ್ದೇ ಆತನಿಗೆ ಮುಳುವಾಯಿತು. ಈ ದುಷ್ಕರ್ಮಿಗಳಿಬ್ಬರು ಉದ್ದೇಶಪೂರ್ವಕವಾಗಿಯೇ ಕೆಳಗೆ ಬೀಳಿಸಿದ್ದ ಬಾಂಬ್ ಇದು ಎಂಬುದು ಈ ಬಿಹಾರದ ಪುಟ್ಟ ಬಾಲಕನ ಅರಿವಿಗೆ ಬರಲೇ ಇಲ್ಲ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಬಾಲಕನ ಬಾಯಿಂದ ಬಂದ ಕೊನೆಯ ಶಬ್ದಗಳೆಂದರೆ "ಭಾಯಿ ಸಾಬ್, ಆಪ್‌ಕಾ ಪ್ಯಾಕೆಟ್ ಗಿರ್ ಗಯಾ ಹೈ (ಅಣ್ಣಾ... ನಿಮ್ಮ ಪೊಟ್ಟಣ ಕೆಳಗೆ ಬಿದ್ದಿದೆ)".
ಎಲ್ಲವೂ ಚಿಟಿಕೆ ಹೊಡೆಯುವಷ್ಟರಲ್ಲಿ ನಡೆದು ಹೋಗಿತ್ತು. ತಕ್ಷಣವೇ ದಟ್ಟ ಹೊಗೆ ಬಂದು, ದೊಡ್ಡ ಸ್ಫೋಟವೇ ಆಯಿತು. ನನ್ನ ಸೋದರ ಸಂಬಂಧಿ ಹುಡುಗ ರಕ್ತದ ಮಡುವಿನಲ್ಲಿದ್ದ ಎಂದು ಸಂತೋಷ್‌ನ ಚಿಕ್ಕಪ್ಪ ಫಂತೂಶ್ ಹೇಳಿದ್ದಾರೆ. ಅವರು ಈ ಪ್ರದೇಶದಲ್ಲಿ ಆಮ್ಲೆಟ್ ಮತ್ತು ಬಾಯಿಲ್ಡ್ ಎಗ್ ಮಾರಾಟ ಮಾಡುತ್ತಿದ್ದರು.
ಮೊಟ್ಟೆಯ ಕ್ರೇಟ್ ಒಂದನ್ನು ತರಲೆಂದು ಸಂತೋಷ್‌ನನ್ನು ಆತನ ತಂದೆ ಕಳುಹಿಸಿದ್ದರು. ಸಂತೋಷ್‌ನ ತಂದೆ ದೆಹಲಿಯ ಗೋಡೌನ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೆ, ಆತನ ಸಹೋದರ ರಿಕ್ಷಾ ಎಳೆದು ಜೀವನ ಸಾಗಿಸುತ್ತಿದ್ದರು. ಅವರು ಬಿಹಾರದ ಲಾಖಿ ಸರಾಯಿ ಜಿಲ್ಲೆಯವರಾಗಿದ್ದು, 1980ರ ದಶಕದಲ್ಲಿ ದೆಹಲಿಗೆ ವಲಸೆ ಬಂದಿದ್ದರು.
|