ರಾಜಧಾನಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ಸೋಮವಾರ ಅಹಮದಾಬಾದ್‌ನಲ್ಲಿ ಮತ್ತೆ 15ಬಾಂಬ್‌ಗಳು ಪತ್ತೆಯಾಗಿದ್ದು ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಕಸದ ತೊಟ್ಟಿಯೊಂದರಲ್ಲಿ ಸುಮಾರು 15 ಜೀವಂತ ಬಾಂಬ್‌ಗಳು ಪತ್ತೆಯಾಗಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದು, ಶೀಘ್ರವೇ ಸ್ಥಳಕ್ಕೆ ಧಾವಿಸಿದ್ದ ಬಾಂಬ್ ನಿಷ್ಕ್ರಿಯದಳ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಬಾಂಬ್ ಇರುವ ಪ್ರದೇಶದಾದ್ಯಂತ ಜನ ಸಂಚಾರವನ್ನು ನಿಷೇಧಿಸಿದ ಬಳಿಕ ಬಾಂಬ್ ನಿಷ್ಕ್ರಿಯ ಕಾರ್ಯ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದು, ಎಲ್ಲೆಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದರು.
ದೆಹಲಿ ಸ್ಫೋಟ, ಅಹಮದಾಬಾದ್‌ನಲ್ಲಿ ಬಾಂಬ್ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ರಾಜಧಾನಿ ಸೇರಿದಂತೆ ಚೆನ್ನೈ, ಮುಂಬೈ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಿಮಿ ಕೈವಾಡ ?
ದೆಹಲಿಯ ಮೆಹರೂಲಿಯಲ್ಲಿ ಶನಿವಾರ ಮತ್ತೆ ಸಂಭವಿಸಿದ ಬಾಂಬ್ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದ್ದೀನ್‌ನ ಮಾತೃಸಂಸ್ಥೆ ಸಿಮಿಯ ಕೈವಾಡ ಇರುವುದಾಗಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ಸಿಮಿಯ ಸಫ್ದಾರ್ ನಾಗೋರಿ ತನಿಖೆಯ ವೇಳೆ, ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸುವ ಸಲುವಾಗಿ ಸುಮಾರು 125ಮಂದಿಗೆ ಕರ್ನಾಟಕದ ಧಾರವಾಡದಲ್ಲಿ ಕಠಿಣ ತರಬೇತಿ ನೀಡಲಾಗಿತ್ತು ಎಂದು ಸುಳಿವು ನೀಡಿದ್ದ.
ಆ ನಿಟ್ಟಿನಲ್ಲಿ ದೆಹಲಿ ಪೊಲೀಸರು ಸಿಮಿ ಸಂಘಟನೆಯತ್ತ ದೃಷ್ಟಿ ನೆಟ್ಟಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
|