ಸಿನಿಮಾ ನಟರಿಗೂ ವಿವಾದಕ್ಕೂ ಏನೋ ಒಂದು ತೆರನಾದ ನಂಟಿದೆ ಎಂಬುದಕ್ಕೆ ಇದೀಗ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ರಕರ್ತರ ಜೊತೆ ಅನುಚಿತವಾಗಿ ವರ್ತಿಸಿದ ಪರಿಣಾಮ ಖಾನ್ ವಿರುದ್ಧ ದೂರು ದಾಖಲಾಗಿದೆ.
ಪಟಿಯಾಲಾದಲ್ಲಿ ಭಾನುವಾರ ರಾತ್ರಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಛಾಯಚಿತ್ರ ಪತ್ರಕರ್ತರೊಡನೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಭದ್ರತಾ ಸಿಬ್ಬಂದಿ ತನ್ನನ್ನು ಥಳಿಸಿರುವುದಾಗಿಯೂ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ 'ತ್ರಿ ಈಡಿಯಟ್ಸ್' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಛಾಯಚಿತ್ರ ಪತ್ರಕರ್ತ ಫೋಟೋ ತೆಗೆಯಲು ಹೋದಾಗ ಖಾನ್ ಈ ಜಟಾಪಟಿ ನಡೆಸಿ ವಿವಾದಕ್ಕೆ ಸಿಲುಕ್ಕಿದ್ದಾರೆ. ದೈನಿಕ ಮತ್ತು ಸ್ಥಳೀಯ ಟಿವಿ ಚಾನೆಲ್‌ವೊಂದರ ಪತ್ರಕರ್ತರು ಸೈಫ್ ನಟನೆಯ ಫೋಟೋ ತೆಗೆಯಲು ಹೋದಾಗ ಆಕ್ಷೇಪ ವ್ಯಕ್ತಪಡಿಸಿ,ಇಬ್ಬರನ್ನೂ ಥಳಿಸಿದ್ದರು ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಹಲವು ಪತ್ರಕರ್ತರು ಅನುಚಿತವಾಗಿ ವರ್ತಿಸಿದ ಸೈಫ್ ವಿರುದ್ಧ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಿವಾದ ವಿಷಯ ಕೇಳಿದ ಬಳಿಕ ಅಕಾಲಿ ದಳದ ಪ್ರೇಮ್ ಸಿಂಗ್ ಚಾಂಡುಮಾಜ್ರಾ ಮತ್ತು ಬಿಜೆಪಿಯ ರಾಜ್ ಕೌರಾಣಾ ಅವರನ್ನು ಕಳುಹಿಸಿ ಮಾತುಕತೆ ನಡೆಸಿದ ನಂತರ ಪತ್ರಕರ್ತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು.
ಸೈಫ್ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ರೈಲ್ವೆ ಪೊಲೀಸರು ಐಪಿಸಿ 506 (ಕೊಲೆ ಬೆದರಿಕೆ), 341 (ಥಳಿತ),536 (ಹಾನಿ ಮಾಡಿದ ಬಗ್ಗೆ) ರ ಅನ್ವಯ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಜಿಎಸ್ ಗ್ರೇವಾಲ್ ತಿಳಿಸಿದ್ದಾರೆ.
|