ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯುಪಿಎ ಹಾಗೂ ಬಿಜೆಪಿಯ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಉತ್ತಮವಾದ ಬೆಳವಣಿಗೆಯಲ್ಲ ಎಂದು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ನಾವು ಕೋಮುಶಕ್ತಿಗಳ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಅಲ್ಲದೇ ಅವರು ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು ಈ ಸಂದರ್ಭದಲ್ಲಿಯೂ ವಿರೋಧಿಸಿದ ಅವರು, ಆ ಕಾರಣಕ್ಕಾಗಿಯೇ ಜುಲೈ 22ರಂದು ಆಡಳಿತ ಯುಪಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿರುವುದಾಗಿ ತಿಳಿಸಿದ ಕಾರಟ್, ಹಲವು ವರ್ಷಗಳ ತೃತೀಯರಂಗದ ಕನಸು ನನಸಾಗುವ ಗುರಿ ಹತ್ತಿರದಲ್ಲಿಯೇ ಇದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಸಾರ್ವತ್ರಿಕ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕೂಡಲೇ ತೃತೀಯ ರಂಗಕ್ಕೆ ಚಾಲನೆ ನೀಡಿ,ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಪುನರ್‌ಪರಿಶೀಲನೆ ನಡೆಸಬೇಕು ಎಂದು ಮತ್ತೊಮ್ಮೆ ಪುನರುಚ್ಚ ರಿಸಿದರು. ಈ ಒಪ್ಪಂದದಲ್ಲಿ ಹೈಡ್ ಆಕ್ಟ್ ಸೇರಿದಂತೆ ಇನ್ನಿತರ ಷರತ್ತುಗಳು ಸೇರಿದೆ. ಆ ಕಾರಣಕ್ಕಾಗಿಯೇ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಸರ್ಕಾರ ಪುನರ್‌ಪರಿಶೀಲಿಸಬೇಕು ಎಂದು ಕಾರಟ್ ಆಗ್ರಹಿಸಿದರು. |
|