ಪಶ್ಚಿಮಬಂಗಾಳದ ಸಿಂಗೂರ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದ ಬೇಡಿಕೆಯನ್ನಿಟ್ಟು ಮಂಗಳವಾರದಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಸಲ್ಲಿಸಲಾಗಿದೆ ಎಂದರು.
ಸೆಪ್ಟೆಂಬರ್ 7ರಂದು ಸಿಂಗೂರ್ ವಿವಾದದ ಕುರಿತಂತೆ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮಬಂಗಾಳ ಸರ್ಕಾರದ ನಡುವೆ ನಡೆದ ಒಪ್ಪಂದದಂತೆ ಟಾಟಾ ನ್ಯಾನೋ ಘಟಕಕ್ಕಾಗಿ ವಶಪಡಿಸಿಕೊಂಡ ಹೆಚ್ಚುವರಿ ಭೂಮಿಯನ್ನು ರೈತರಿಗೆ ಹಿಂತಿರುಗಿಸುವಂತೆ ಮಾತುಕತೆ ನಡೆಸಿ, ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾಗಿತ್ತು.
ಆ ನಿಟ್ಟಿನಲ್ಲಿ ಒಪ್ಪಂದದಂತೆ ಸರ್ಕಾರ ನಡೆದುಕೊಳ್ಳಬೇಕು ಎಂಬುದು ನಮ್ಮದು ಆಗ್ರಹವಾಗಿದೆ. ಆದರೆ ಸರ್ಕಾರಕ್ಕೆ ಅದಕ್ಕೆ ಒಪ್ಪುತ್ತಿಲ್ಲ ಎಂದು ಅವರು ದೂರಿದರು. ಇದರಿಂದ ಸರ್ಕಾರದ ಮೇಲಿನ ನಂಬಿಕೆ ಹೊರಟುಹೋಗಲಿದೆ ಎಂದು ಬ್ಯಾನರ್ಜಿ ಹೇಳಿದರು.
ಸಿಂಗೂರ್ ವಿವಾದದ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕ ಪ್ರವಾಸದಿಂದ ಹಿಂತಿರುಗಿದ ಬಳಿಕ ಅವರೊಂದಿಗೂ ಮಾತುಕತೆ ನಡೆಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೇ ಈ ಕುರಿತು ಇನ್ನಿತರ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಚರ್ಚಿಸುವುದಾಗಿಯೂ ಹೇಳಿದರು. |
|