ಕೋಮು ಸೂಕ್ಷ್ಮ ಪ್ರದೇಶವೆಂದೇ ಪರಿಗಣಿತವಾಗಿರುವ ಗುಜರಾತ್‌ನ ಮೊಡೆಸ್ಸಾ ಮತ್ತು ಮಹಾರಾಷ್ಟ್ರದ ಮಾಲೆಗಾಂವ್ ಪ್ರದೇಶದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಪೋಟದಿಂದಾಗಿ 15 ವರ್ಷದ ಬಾಲಕನೂ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದು ಎಂಬತ್ತು ಮಂದಿ ಗಾಯಗೊಂಡಿದ್ದಾರೆ.
ಮಾಲೆಗಾಂವ್ ಪ್ರದೇಶದಲ್ಲಿ ಈ ಘಟನೆಯ ಬಳಿಕ ಉದ್ವಿಗ್ನ ಪರಿಸ್ಥಿತಿ ಮುಂದುವರಿದದಿದ್ದು ಉದ್ರಿಕ್ತ ಜನ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಸುರಕ್ಷತಾ ಕ್ರಮದ ಅಂಗವಾಗಿ ಕರ್ಫ್ಯೂ ವಿಧಿಸಲಾಗಿದೆ.
ಮಾಲೆಗಾಂವ್‌ನ ಜನನಿಬಿಡ ಬಿಖ್ಖು ಚೌಕ್ ಏರಿಯ ಹೋಟೆಲ್ ಒಂದರ ಸಮೀಪ ಘಟನೆ ಸಂಭವಿಸಿದೆ. ಇದರಿಂದಾಗಿ ನಾಲ್ಕು ಮಂದಿ ಮೃತಪಟ್ಟಿದ್ದು ಸುಮಾರು ಎಪ್ಪತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿ ಸಿಲ್ವರ್ ಬಣ್ಣದ ಬೈಕ್ ಒಂದನ್ನು ಪಾರ್ಕ್ ಮಾಡಲಾಗಿತ್ತು ಎಂದು ಪೋಲೀಸರು ಹೇಳಿದ್ದಾರೆ.
ಸಾಮಾನ್ಯ ಜನ ನಡೆಸಿದ ಕಲ್ಲುತೂರಾಟದಲ್ಲಿ ಪೋಲೀಸ್ ವಾಹನ ಮತ್ತು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರುಗಳ ವಾಹನಗಳಿಗೆ ಹಾನಿಯುಂಟಾಗಿದೆ ಎಂದೂ ಪೋಲೀಸರು ವಿವರಿಸಿದ್ದಾರೆ.ಉದ್ರಿಕ್ತ ಗುಂಪು ಚದುರಿಸಲು ಪೋಲೀಸರು ನಂತರ ಅಶ್ರುವಾಯು ಸಿಡಿಸಬೇಕಾಗಿ ಬಂತು.
ಸಹಾಯಕ ಎಸ್.ಪಿ ವೀರೇಶ್ ಪ್ರಭು ಸೇರಿದಂತೆ ಐದು ಪೋಲೀಸರು ಜನರು ನಡೆಸಿದ ಕಲ್ಲು ತೂರಾಟದ ಪರಿಣಾಮ ಗಾಯಗೊಂಡಿದ್ದಾರೆಂದು ಪೋಲೀಸ್ ಮೂಲಗಳು ತಿಳಿಸಿವೆ.
ಬನಾಸ್ಕಾಂತ್ ಜಿಲ್ಲೆಯ ಮೊಡೆಸ್ಸಾದಲ್ಲಿ ಬೈಕ್ ಒಂದಕ್ಕೆ ಜೋಡಿಸಿದ ಬಾಂಬ್ ಸ್ಪೋಟಗೊಂಡು 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಅಲ್ಲದೆ ಇತರೆ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಎಸ್.ಪಿ ಬ್ರಹ್ಮಬಟ್ಟ್ ತಿಳಿಸಿದ್ದಾರೆ.
" ಸುಕ ಬಜಾರ್ ಏರಿಯಾದಲ್ಲಿ ಸಣ್ಣ ಪ್ರಮಾಣದ ಬಾಂಬ್ ಸ್ಪೋಟದ ಪರಿಣಾಮವಾಗಿ ಒಬ್ಬ ಬಾಲಕ ಸಾವನ್ನಪ್ಪಿದ್ದಾನೆ" ಎಂದು ಸಬರ್‌ಕಾಂತಾ ಜಿಲ್ಲಾ ಕಲೆಕ್ಟರ್ ಎನ್. ನರ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಪಾರ್ಕ್ ಮಾಡಲಾಗಿದ್ದ ಬೈಕ್ ಒಂದರಲ್ಲಿ ಸ್ಪೋಟಕ ತುಂಬಿದ್ದ ಚೀಲವನ್ನು ಆಗಂತುಕರಿಬ್ಬರು ಇರಿಸಿದ್ದಾರೆಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ." ಎಂದು ಅವರು ಹೇಳಿದ್ದಾರೆ. |
|