ರಾಜಸ್ತಾನ್ ಜೋಧಪುರ್ ಸಮೀಪದ ಮೆಹರಾನ್‌ಗರ್‌ನಲ್ಲಿನ ಚಾಮುಂಡ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ಕಿಕ್ಕಿರಿದು ನೆರೆದಿದ್ದ ಭಕ್ತರ ಮಹಾಪೂರದಿಂದ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಕನಿಷ್ಟ 150ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಇಂದಿನಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವದ ಅಂಗವಾಗಿ ಗುಡ್ಡದಿಂದ ಆವೃತ್ತವಾಗಿರುವ ಪ್ರಸಿದ್ಧ ಜೋಧ್‌ಪುರದ ಚಾಮುಂಡ ದೇವಾಲಯದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಸುಮಾರು ಬೆಳಗಿನ ಜಾವದಲ್ಲಿ ಬಾಂಬ್ ಸ್ಫೋಟದ ವದಂತಿಗಳನ್ನು ಹಬ್ಬಿಸಿದ ಪರಿಣಾಮ ಜನರು ಗಾಬರಿಯಿಂದ ಓಡಲುತೊಡಗಿದಾಗ ಈ ಭಾರೀ ಕಾಲ್ತುಳಿತ ಘಟನೆ ಸಂಭವಿಸಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ.
ಸುಮಾರು 30 ಮೃತದೇಹಗಳನ್ನು ಮಹಾತ್ಮಾಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದ ಶವಗಳನ್ನು ಮಥುರಾದಾಸ್ ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ಪೊಲೀಸರು, ಸ್ಥಳೀಯರು ನಿರತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. |
|