ಖಾಸಗಿ ನ್ಯೂಸ್ ಚಾನೆಲ್‌ವೊಂದರ ಪತ್ರಕರ್ತೆಯೊಬ್ಬರು ಕೆಲಸ ಪೂರೈಸಿ ವಾಪಸಾಗುತ್ತಿದ್ದ ವೇಳೆ ದೆಹಲಿಯ ನೈರುತ್ಯ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗಿನ ಮುಂಜಾವಿನ ಹೊತ್ತಿನಲ್ಲಿ ಆಗಂತುಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.
ಹೆಡ್‌ಲೈನ್ಸ್ ಟುಡೇಯ ನ್ಯೂಸ್ ಪ್ರೊಡ್ಯೂಸರ್ ಆಗಿದ್ದ 27ರ ಹರೆಯದ ಸೌಮ್ಯ ವಿಶ್ವನಾಥನ್ ಅವರನ್ನು ವಸಂತ ಕುಂಜ್ ಪ್ರದೇಶದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗಿನ ಜಾವ 3.30ರ ಸುಮಾರಿಗೆ ಕಾರಿನಲ್ಲಿಯೇ ಗುಂಡು ಹೊಡೆದು ಹತ್ಯೆಗೈದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಕೆಯ ಕಾರು ರಸ್ತೆಯ ಡಿವೈಡರ್‌ಗೆ ಹೊಡೆದು ನಿಂತಿದ್ದು, ಆಕೆಯ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸೌಮ್ಯ ಕೇರಳದ ಮೂಲದವರಾಗಿದ್ದು,ಆಕೆಯನ್ನು ಗಮನಿಸಿದ ಕೂಡಲೇ ಎಐಐಎಂಎಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.
ಸೌಮ್ಯ ಅವರ ತಲೆಯ ಬಲಭಾಗದಿಂದ ಬುಲೆಟ್ ತೂರಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಆಕೆಯ ಕಾರಿನ ಯಾವುದೇ ಚಕ್ರಕ್ಕೆ ಗುಂಡು ತಗುಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ತೆರನಾದ ತನಿಖಾ ವರದಿಗಳನ್ನು ಮಾಡುತ್ತಿದ್ದ ಸೌಮ್ಯ, ಹಲವು ಬೆದರಿಕೆಯನ್ನು ಎದುರಿಸುತ್ತಿದ್ದರು.ಈ ನಿಟ್ಟಿನಲ್ಲಿ ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |
|