ಭಾರತ-ಅಮೆರಿಕ ನಡುವಿನ ಮಹತ್ವಾಕಾಂಕ್ಷೆಯ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆ ಯುಎಸ್ ಸೆನೆಟ್‌ನಲ್ಲಿ ಮತ ಚಲಾವಣೆ ಬುಧವಾರ ಸಂಜೆ ಅಂತಿಮಗೊಳ್ಳುವ ಮೂಲಕ ಕಳೆದ 30 ವರ್ಷಗಳಿಂದ ಅಣುಬಂಧಕ್ಕೆ ಹೇರಿದ್ದ ನಿಷೇಧಕ್ಕೆ ತೆರೆ ಬೀಳಲಿದೆ ಎಂದು ಅಮೆರಿಕ ಸೆನೆಟ್ ಮೂಲ ವಿಶ್ವಾಸ ವ್ಯಕ್ತಪಡಿಸಿದೆ.
ಅಣುಬಂಧದ ಕುರಿತಂತೆ ಭಾರತ ಈಗಾಗಲೇ ಎರಡು ಕ್ಲಿಷ್ಟಕರ ಹಂತವನ್ನು ಯಶಸ್ವಿಯಾಗಿ ದಾಟಿದ್ದು,ಭಾನುವಾರ ಅಮೆರಿಕ ಪ್ರಜಾಪ್ರತಿನಿಧಿ ಸಭೆ ಕೂಡ 298-117 ಮತಗಳ ಅಂತರದಲ್ಲಿ ಅನುಮೋದನೆ ಲಭಿಸಿತ್ತು. ಇದೀಗ ಭಾರತ ಮತ್ತು ಅಮೆರಿಕ ಅಂತಿಮ ಹಂತವಾಗಿರುವ ಅಮೆರಿಕ ಕಾಂಗ್ರೆಸ್‌ನಲ್ಲಿ ಗ್ರೀನ್ ಸಿಗ್ನಲ್ ದೊರೆಯುವ ಆಶಾಭಾವನೆಯನ್ನು ಹೊಂದಿದೆ.
ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಡೆಮೊಕ್ರೆಟ್ಸ್ ಮತ್ತು ರಿಪಬ್ಲಿಕನ್ಸ್ ಪ್ರತಿನಿಧಿಗಳ ಬೆಂಬಲ ದೊರೆಯುವ ಮೂಲಕ ಒಪ್ಪಂದಕ್ಕೆ ಅಂಕಿತ ಬೀಳಲಿದೆ ಎಂಬ ನಿರೀಕ್ಷೆಯಲ್ಲಿದೆ.
ಐತಿಹಾಸಿಕ ಒಪ್ಪಂದ:
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದಲ್ಲಿ ಬುಷ್ ಆಡಳಿತ ಜಯಶಾಲಿಯಾಗಬಹುದೇ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಜ್ಯ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು,ಈ ಒಪ್ಪಂದ ಐತಿಹಾಸಿಕವಾಗಿದ್ದು,ಇದರಿಂದ ವಾಷಿಂಗ್ಟನ್ ಮತ್ತು ಭಾರತ ನಡುವಿನ ಸಂಬಂಧ ಮತ್ತಷ್ಟು ಹತ್ತಿರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೂ ಒಪ್ಪಂದ ಈಡೇರಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ ರೈಸ್,ಇದೊಂದು ಎರಡು ದೇಶಗಳ ನಡುವಿನ ಐತಿಹಾಸಿಕ ಒಪ್ಪಂದವಾಗಿದೆ ಎಂದು ಬಣ್ಣಿಸಿದರು.
ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆಡಳಿತಾವಧಿ ಜನವರಿ 20ಕ್ಕೆ ಅಂತ್ಯಗೊಳ್ಳಲಿದ್ದು,ತಾವು ಅಧಿಕಾರದ ಗದ್ದುಗೆಯಿಂದ ಕೆಳಕ್ಕಿಳಿಯುವ ಮುನ್ನ ಅಣು ಒಪ್ಪಂದಕ್ಕೆ ಅಂಕಿತ ಬೀಳಬೇಕು ಎಂಬ ಮಹತ್ವಾಂಕ್ಷೆ ಬುಷ್ ಅವರದ್ದು. |
|