ಭಯೋತ್ಪಾದಕರನ್ನು 'ದೇಶದ ಶತ್ರುಗಳು' ಎಂಬುದಾಗಿ ಉಲ್ಲೇಖಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಯೋತ್ಪಾದಕರ ದಾಳಿ ಸಂಚುಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಭಯೋತ್ಪಾದನೆ ವಿಚಾರವನ್ನು ರಾಜಕೀಯಗೊಳಿಸುವವರಿಗೆ ಎಚ್ಚರಿಕೆ ನೀಡಿದ್ದು, ಸೋನಿಯಾ ಅವರ ಈ ಎಚ್ಚರಿಕೆಯು ಕಾಂಗ್ರೆಸ್ ಪಕ್ಷವು ಭಯೋತ್ಪಾದನೆ ಬಗ್ಗೆ ಮೃದು ಧೋರಣೆಯನ್ನು ತಾಳುತ್ತಿದೆ ಮತ್ತು ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದೆ ಎಂದು ಇತ್ತೀಚಿಗೆ ಬಿಜೆಪಿಯು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆಯೆಂಬಂತಿತ್ತು.ಮಹಾತ್ಮಾಗಾಂಧಿ ಜನ್ಮದಿನೋತ್ಸವ ಅಂಗವಾಗಿ ಹರ್ಯಾಣದ ಪಾಣಿಪಟ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಭಯೋತ್ಪಾದಕರು ದೇಶದ ಒಗ್ಗಟ್ಟು ಮತ್ತು ಭಾವೈಕ್ಯವನ್ನು ಕೊನೆಗೊಳಿಸಲು ಬಯಸುತ್ತಾರೆ. ಅದಕ್ಕಾಗಿ, ಮುಗ್ಧ ಜನರ ಹತ್ಯೆಗೈದು ಭಯೋತ್ಪಾದಕ ವಾತಾವರಣವನ್ನು ಸೃಷ್ಟಿಸುತ್ತಾರೆ. ಇಂತಹ ಜನರು ದೇಶದ ಶತ್ರುಗಳಾಗಿದ್ದಾರೆ. ಇಂತಹ ಚಟುವಟಿಕೆಗಳಿಗೆ ಅಂತ್ಯಹಾಡಬೇಕು. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಇದಕ್ಕಾಗಿ ಹೋರಾಡಲು ಎಲ್ಲರೂ ಮುಂದೆ ಬರಬೇಕು ಎಂದಿದ್ದಾರೆ.ಭಯೋತ್ಪಾದನೆಯಂತಹ ದುರಂತ ಕೃತ್ಯಗಳ ಪ್ರಯೋಜನವನ್ನು ದೇಶದಲ್ಲಿ ಕೆಲವು ಮಂದಿ ಪಡೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಅಲ್ಲದೆ, ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇಂತಹ ಮಾರ್ಗದಲ್ಲಿ ಮಾತ್ರವೇ ಜಯ ಸಾಧ್ಯ ಎಂದು ಅವರು ನಂಬಿದ್ದಾರೆ ಎಂದು ಸೋನಿಯಾ ಅಭಿಪ್ರಾಯಪಟ್ಟರು.ಭಯೋತ್ಪಾದಕರು ಮತ್ತು ಭಯೋತ್ಪಾದನೆ ವಿಚಾರವನ್ನು ರಾಜಕೀಕರಣಗೊಳಿಸುತ್ತಿರುವವರು ಮಾಡುವ ಕೃತ್ಯ ಸಮಾನವಾಗಿದೆ. ಇಬ್ಬರೂ ಸಮಾಜವನ್ನು ಒಡೆಯಲು ಪ್ರಯತ್ನಿಸುವವರಾಗಿದ್ದಾರೆ ಎಂದು ಸೋನಿಯಾ ಸ್ಪಷ್ಟಪಡಿಸಿದರು. |
ಸಂಬಂಧಿತ ಮಾಹಿತಿ ಹುಡುಕಿ |
|