ದೇಶದ ಗಡಿಭಾಗವಾದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಕ್ರಮ ನುಸುಳುವಿಕೆ ಮುಂದುವರಿದಿದ್ದು,ಶುಕ್ರವಾರ ಬೆಳಿಗ್ಗೆ ಮತ್ತೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಬಿಎಸ್‌ಎಫ್ ಗುಂಡಿಗೆ ಬಲಿಯಾಗಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ಆರು ದಿನಗಳಿಂದ ನೆರೆಯ ಪಾಕ್‌ನಿಂದ ಅಕ್ರಮವಾಗಿ ಗಡಿನುಸುಳಲು ಪ್ರಯತ್ನಿಸುವ ಮೂಲಕ ಅಶಾಂತಿಯನ್ನು ಹುಟ್ಟು ಹಾಕುತ್ತಿರುವುದಾಗಿ ಬಿಎಸ್ಎಫ್ ಮೂಲಗಳು ಹೇಳಿವೆ.
ಕಳೆದ ರಾತ್ರಿ ಜಮ್ಮು ಜಿಲ್ಲೆಯ ಕುನಾರಾ ತಾನಾ ಕುರ್ದ್ ಫಾರ್ವರ್ಡ್‌ನ ಆರ್.ಎಸ್.ಪುರ ಪ್ರದೇಶದಲ್ಲಿ ನಾಲ್ಕು ಮಂದಿ ಉಗ್ರರು ಭಾರತದ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿರುವುದಾಗಿ ಬಿಎಸ್‌ಎಫ್‌ನ ಸಹಾಯಕ ಪೊಲೀಸ್ ಮಹಾನಿರ್ದೇಶಕ ಜೆಬಿ ಸಾಗ್ವಾನ್ ತಿಳಿಸಿದ್ದಾರೆ.
ಬಿಎಸ್‌ಎಫ್ ಪಡೆಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಅದಕ್ಕೆ ಪ್ರತಿಯಾಗಿ,ಬಿಎಸ್‌ಎಫ್ ದಾಳಿ ನಡೆಸಿದ ಪರಿಣಾಮ ಓರ್ವ ಉಗ್ರ ಸ್ಥಳದಲ್ಲಿಯೇ ಬಲಿಯಾಗಿದ್ದು,ಉಳಿದ ಉಗ್ರರು ಪಾಕಿಸ್ತಾನದ ಡಿಚ್ ಕಮ್ ಬಾಂಧ್ ಪ್ರದೇಶದತ್ತ ಪರಾರಿಯಾಗಿರುವುದಾಗಿ ವಿವರಿಸಿದ್ದಾರೆ.
ನುಸುಳುಕೋರ ಉಗ್ರನ ಶವವನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದು,ಕಳೆದ ಆರು ದಿನಗಳಲ್ಲಿ ಪಾಕ್ ಆರ್ಮಿ ಇದು ನಡೆಸಿದ ಮೂರನೇ ದಾಳಿಯಾಗಿದೆ. ಅವರು ನುಸುಳುಕೋರ ಉಗ್ರರಿಗೆ ಭಾರತದೊಳಕ್ಕೆ ನುಸುಳಲು ನೆರವು ನೀಡುತ್ತಿರುವುದಾಗಿ ದೂರಿದರು.
|