ಶಿವಸೇನೆಯ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ದೂರನ್ನು ವಾಪಸು ತೆಗೆದುಕೊಂಡಿರುವುದಾಗಿ ಲೋಕೋಪಯೋಗಿ ಸಚಿವ ಮತ್ತು ಎನ್‌ಸಿಪಿ ಮುಖಂಡ ಚಗನ್ ಭುಜಬಲ್ ಶುಕ್ರವಾರ ತಿಳಿಸಿದ್ದು, ಇದರೊಂದಿಗೆ ಚಗನ್ ಶಿವಸೇನಾ ಪಡಸಾಲೆಗೆ ಸೇರ್ಪಡೆಗೊಳ್ಳಲು ವೇದಿಕೆ ಸಜ್ಜುಗೊಂಡಂತಾಗಿದೆ.
ಬಾಳಾಸಾಹೇಬರ ವಯಸ್ಸನ್ನು ಪರಿಗಣಿಸಿ ಅವರ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಹಿಂತೆಗೆಯುವಂತೆ ಸಂಜಯ್ ರೌತ್ ಮತ್ತು ಸುಭಾಶ್ ದೇಸಾಯಿ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ನಾನು ಠಾಕ್ರೆ ಅವರ ವಿರುದ್ಧ ಹೂಡಿದ್ದ ದೂರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಭುಜಬಲ್ ಅವರು ಇಲ್ಲಿನ ಬಾಂದ್ರಾ ನ್ಯಾಯಾಲಯದಿಂದ ಹೊರ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಅಲ್ಲದೇ ಬಾಳಾ ಸಾಹೇಬ್ ಠಾಕ್ರೆ ಅವರನ್ನು ಊಟೋಪಚಾರಕ್ಕೆ ಶುಕ್ರವಾರ ಆಹ್ವಾನ ನೀಡಿರುವುದಾಗಿ ಅವರು ತಿಳಿಸಿದರು. ಒಟ್ಟಿನಲ್ಲಿ ಭುಜಬಲ್ ಅವರು ಸೇನೆಗೆ ಮತ್ತೆ ಸೇರುವ ಎಲ್ಲಾ ಲಕ್ಷಣ ದೊರೆತಂತಾಗಿದೆ.
ಘಟನೆ ವಿವರ:1997ರ ಜುಲೈ 11ರಂದು ರಾಮಾ ಬಾಯ್ ಅಂಬೇಡ್ಕರ್ ನಗರದಲ್ಲಿದ್ದ ಡಾ.ಅಂಬೇಡ್ಕರ್ ಪ್ರತಿಮೆಯನ್ನು ಅಪವಿತ್ರಗೊಳಿಸಿದ ಘಟನೆ ನಡೆದಿದ್ದು,ಆ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 12ಕ್ಕೂ ಅಧಿಕ ದಲಿತರು ಸಾವನ್ನಪ್ಪಿದ್ದರು.
ಬಳಿಕ ಜುಲೈ 23-24ರ ಶಿವಸೇನಾ ಮುಖವಾಣಿ ಸಾಮ್ನಾ ಸಂಚಿಕೆಯಲ್ಲಿ ಘಟನೆಯ ಮಾಸ್ಟರ್ ಮೈಂಡ್ ಭುಜಬಲ್ ಎಂಬುದಾಗಿ ಆರೋಪಿಸಿ ವರದಿ ಪ್ರಕಟಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡ ಭುಜಬಲ್ ಅವರು 1997 ಸೆಪ್ಟೆಂಬರ್ 4ರಂದು ಬಾಳಾಸಾಹೇಬ್ ಠಾಕ್ರೆ,ಸಾಮ್ನಾ ಸಂಪಾದಕ ಸಂಜಯ್ ರೌತ್,ಪ್ರಕಾಶಕ ಸುಭಾಷ್ ದೇಸಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಭುಜಬಲ್ ದೂರು ಸಲ್ಲಿಸಿದ್ದರು. |