ಒರಿಸ್ಸಾದ ಕಂಧಮಾಲ್‌ನಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದು,ಶುಕ್ರವಾರ ಇಲ್ಲಿನ ಸೂಕ್ಷ್ಮ ಪ್ರದೇಶವಾದ ತುಮುದಿಬಾಂಧಾ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಇಬ್ಬರನ್ನು ಕೊಚ್ಚಿ ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತುಮುದಿಬಾಂಧಾದ ಸಿಂಧುಪಾಕಾ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ಇಬ್ಬರನ್ನು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ಕಂಧಮಾಲ್ ಜಿಲ್ಲಾಧಿಕಾರಿ ಕೃಷ್ಣಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಹರಿತವಾದ ಆಯುಧದಿಂದ ಮನೆಯೊಳಗೆ ನುಗ್ಗಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆಗೋಸ್ಟ್ 23ರಂದು ವಿಶ್ವಹಿಂದೂ ಪರಿಷತ್‌ನ ಸ್ವಾಮಿ ಲಕ್ಷ್ಣಣಾನಂದ ಹತ್ಯೆಯ ಬಳಿಕ ಆರಂಭಗೊಂಡ ಹಿಂಸಾಕಾಂಡದಲ್ಲಿ ಈವರೆಗೆ ಒಟ್ಟು 35ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ವಿವಿಧ ಪ್ರದೇಶಗಳಿಂದ 34ಮಂದಿಯನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 371ಕ್ಕೆ ಏರಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಂಬತ್ತು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ಫ್ಯೂವನ್ನು ಹೇರಲಾಗಿದ್ದು, ಜನರಿಗೆ ದೈನಂದಿನ ಆಹಾರವನ್ನು ಖರೀದಿಸಲು ಅನುಕೂಲವಾಗುಂತೆ ಬೆಳಿಗ್ಗೆ ಸಮಯದಲ್ಲಿ ಕೆಲ ಹೊತ್ತು ಕರ್ಫ್ಯೂವನ್ನು ಸಡಿಲಿಕೆಗೊಳಿಸಲಾಗುತ್ತಿದೆ. |