ಭಾರತೀಯ ಜನತಾ ಪಕ್ಷದ ಸಂಸದ ವೀರೇಂದ್ರ ಕುಮಾರ್‌ಗೆ ಮಧ್ಯಪ್ರದೇಶದ ಬೀನಾ ಪ್ರದೇಶದಲ್ಲಿ ಶುಕ್ರವಾರ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಯದ್ವಾತದ್ವಾ ಹೊಡೆದ ಪರಿಣಾಮ, ಸಚಿವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಇಲ್ಲಿನ ಬೀನಾ ಪ್ರದೇಶದ ಚೋಟಿ ಬಜಾರ್ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದ್ದು , ಅದನ್ನು ನಿವಾಸಿಗಳು ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದ ವೀರೇಂದ್ರ ಕುಮಾರ್‌ಗೆ ಗೂಸಾ ನೀಡಿದ ಘಟನೆ ನಡೆದಿದೆ.
ತೆರವು ಕಾರ್ಯಾಚರಣೆ ಕುರಿತಂತೆ ಸ್ಥಳೀಯ ಪೊಲೀಸರೊಂದಿಗೆ ಸಂಸದರು ವಾಗ್ವಾದಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಮಾತುಕತೆ ವಿಪರೀತಕ್ಕೆ ಹೋಗುತ್ತಿದ್ದಂತೆಯೇ ಆರ್‌ಪಿಎಫ್ ಜವಾನ ಮೇಲೆ ಕೆಲವು ಜನರು ಕಲ್ಲು ತೂರಾಟ ನಡೆಸಲು ಆರಂಭಿಸಿದರು,ಆಗ ಸಿಟ್ಟಿಗೆದ್ದ ಆರ್‌ಪಿಎಫ್ ಪಡೆ ತಿರುಗಿ ಬಿದ್ದಿತ್ತು.
ಆಕ್ರೋಶಿತ ಆರ್‌ಪಿಎಫ್ ಸಂಸದರ ಮೇಲೆ ಏರಿ ಹೋಗಿ ಹೊಡೆತ ನೀಡಿದ್ದಾರೆ.ಸ್ಥಳದಲ್ಲಿಯೇ ನೆಲಕ್ಕುರುಳಿದ ಸಂಸದ ವೀರೇಂದ್ರ ಕುಮಾರ್ ತಲೆಯಿಂದ ರಕ್ತಸುರಿಯಲಾರಂಭಿಸಿದ್ದು, ಅವರು ಮೂರ್ಛೆ ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಅವರನ್ನು ಭೂಪಾಲ್ ಹಮಿದಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರನ್ನು ತೀವ್ರನಿಗಾ ಘಟಕದಲ್ಲಿ ಇರಿಸಿ,ಚಿಕಿತ್ಸೆ ನೀಡಲಾಗುತ್ತಿದ್ದು, ಸಚಿವರ ಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ.
ಘಟನೆಗೆ ಸಂಬಂಧಿಸಿದಂತೆ ಮೂರು ದಿನದೊಳಗೆ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕ ಎಸ್.ಕೆ.ರೌತ್ ಅವರು ರೈಲ್ವೆ ಇನ್ಸ್‌ಪೆಕ್ಟರ್ ಜನರಲ್ ಅರುಣ್ ಮೋಹನ್ ರಾವ್ ಅವರಿಗೆ ಆದೇಶ ನೀಡಿದ್ದಾರೆ.
ಅಲ್ಲದೇ ಆರು ಮಂದಿ ಗರ್ವನ್‌ಮೆಂಟ್ ರೈಲ್ವೆ ಪೊಲೀಸ್ (ಜಿಆರ್‌ಪಿ) ವಿರುದ್ಧ ಕೊಲೆ ಯತ್ನ ಆರೋಪದ ಮೇಲೆ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ. |