ಒರಿಸ್ಸಾದ ಬಾರ್‌ಗರ್ ಜಿಲ್ಲೆಯಲ್ಲಿನ ಚರ್ಚ್ ಪ್ರಾಯೋಜಿತ ಅನಾಥಾಲಯಕ್ಕೆ ದಾಳಿ ನಡೆಸಿದ ಗುಂಪೊಂದು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 20ರ ಹರೆಯದ ಹಿಂದೂ ಯುವತಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ವಿಶ್ವಹಿಂದೂ ಪರಿಷತ್‌ನ ಸ್ವಾಮಿ ಲಕ್ಷ್ಮಣಾನಂದ ಅವರನ್ನು ಹತ್ಯೆಗೈದ ನಂತರ ಒರಿಸ್ಸಾ ಕೋಮುದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದು, ಈಗಾಗಲೇ ನೂರಾರು ಮನೆಗಳು ಸುಟ್ಟು ಭಸ್ಮವಾಗಿದ್ದಲ್ಲದೆ,ಪೊಲೀಸ ಗೋಲಿಬಾರ್, ಘರ್ಷಣೆಯಲ್ಲಿಯೇ 35ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಕ್ರೈಸ್ತ ಸನ್ಯಾಸಿಯೊಬ್ಬರ ಮೇಲೆ ಅತ್ಯಾಚಾರ ನಡೆಸಲಾಗಿದ್ದು ,ಇದೀಗ ಕ್ರೈಸ್ತ ಸಮುದಾಯದ ಅನಾಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿಂದೂ ಯುವತಿಯೊಬ್ಬಳನ್ನು ಕ್ರೈಸ್ತ ಸಮುದಾಯದವಳೆಂದು ತಪ್ಪಾಗಿ ಅರ್ಥೈಸಿ, ಅತ್ಯಾಚಾರ ಎಸಗಿ ಜೀವಂತವಾಗಿ ದಹಿಸಿದ ಪೈಶಾಚಿಕ ಕೃತ್ಯಕ್ಕೆ ಇಲ್ಲಿನ ಹಿರಿಯ ಪಾದ್ರಿಯೊಬ್ಬರು ಆಘಾತಕ್ಕೆ ಒಳಗಾಗಿದ್ದಾರೆ.
ಬಾರ್‌ಗರ್ ಜಿಲ್ಲೆಯ ಪಾದಂಬೂರ್ ಗ್ರಾಮದಲ್ಲಿನ ಅನಾಥಾಲಯಕ್ಕೆ ನುಗ್ಗಿದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಗುಂಪು ದಾಳಿ ನಡೆಸಿ ಎಸಗಿದ ಪೈಶಾಚಿಕ ಕೃತ್ಯವನ್ನು ಕೆಲವು ಪೊಲೀಸರು ಮತ್ತು ಸ್ಥಳೀಯರು ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
ಅನಾಥಾಲಯದೊಳಗೆ ದಾಳಿ ನಡೆಸಿದ ಗುಂಪು ಆಕೆಯನ್ನು ಕ್ರೈಸ್ತಳೆಂದು ಭಾವಿಸಿದ್ದರು. ನಿಜಕ್ಕೂ ಆಕೆ ಹಿಂದೂ ಸಮುದಾಯದವಳಾಗಿದ್ದಳು.ಆಕೆ ಅನಾಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಳು ಎಂದು ಪೀಟರ್ ಹೇಳಿದ್ದಾರೆ.
ರಜನಿ ಎಂಬ 20ರ ಹರೆಯದ ಯುವತಿ ಪಾದಂಬೂರ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು.ಆರ್ಥಿಕ ಮುಗ್ಗಟ್ಟಿನಿಂದ ತೊಳಲಾಡುತ್ತಿದ್ದ ಆಕೆ ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ಅನಾಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಮನುಷ್ಯತ್ವ ಮರೆತ ಹಿಂದೂಪರ ಸಂಘಟನೆಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ,ಬೆಂಕಿ ಹಚ್ಚಿ ಸುಟ್ಟಿದ್ದು,ಅನಾಥಾಯಲವನ್ನು ಅಗ್ನಿಗಾಹುತಿ ಮಾಡಿರುವುದಾಗಿ ಪೀಟರ್ ದೂರಿದ್ದಾರೆ.
ಪಾದರ್ ಎಡ್ವರ್ಡ್ ಸೆಕ್ಯುರಿಯಾ ಅವರು ನಡೆಸುತ್ತಿರುವ ಈ ಅನಾಥಾಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ರಜನಿ ಕಳೆದ ಎರಡು ವರ್ಷಗಳ ಹಿಂದೆ ಸೇರ್ಪಡೆಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಪಾದರ್ ಸೆಕ್ಯುರಿಯಾ ಅವರಿದ್ದ ರೂಂ ಅನ್ನು ಲಾಕ್ ಮಾಡಿದ ಗುಂಪು,ಆಕೆಯ ಮೇಲೆ ದಾಳಿ ನಡೆಸಿದಾಗ,ತನ್ನನ್ನು ರಕ್ಷಿಸಿ ಪಾದರ್ ಎಂಬ ಆರ್ತನಾದ ಕೇಳಿ ಬರುತ್ತಿತ್ತು, ತನ್ನನ್ನು ಕೊಲ್ಲುತ್ತಾರೆ ರಕ್ಷಿಸಿ ಎಂಬ ಕೂಗು ತಮ್ಮನ್ನು ತಲ್ಲಣಗೊಳಿಸಿತ್ತು ಎಂದು ಪೀಟರ್ ತಿಳಿಸಿದ್ದು, ಆಕೆಯನ್ನು ಹೊರಹೋಗಲು ಬಿಡದ ಗುಂಪು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ನಂತರ ಬೆಂಕಿ ಹಚ್ಚಿ ಕೊಂದಿರುವುದಾಗಿ ಹೇಳಿದರು. |