ಕಾಶ್ಮೀರದಲ್ಲಿ ಸೋಮವಾರ ಲಾಲ್ ಚೌಕ್‌ದಲ್ಲಿ ಪ್ರತ್ಯೇಕತವಾದಿಗಳು ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಕಾಶ್ಮೀರ ಕಣಿವೆ ಪ್ರದೇಶದಾದ್ಯಂತ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ ಚೌಕ್ ಸುತ್ತ-ಮುತ್ತ ಶಸ್ತ್ರಾಸ್ತ್ರಧಾರಿ ರಕ್ಷಣಾ ಸಿಬ್ಬಂದಿಗಳು ಬಿಗಿ ಪಹರೆಯಲ್ಲಿದ್ದು,ಇಡೀ ಪ್ರದೇಶದಾದ್ಯಂತ ಸೈನಿಕ ಪಡೆ ಸುತ್ತುವರಿದಿರುವುದಾಗಿ ಹೇಳಿದೆ.
ಆ ನಿಟ್ಟಿನಲ್ಲಿ ಸಾರ್ವಜನಿಕ ಶಾಂತಿ-ಸೌಹಾರ್ದತೆಗೆ ಧಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಖಾಸಗಿ ಟಿವಿ ಚಾನೆಲ್‌ಗಳ ಸುದ್ದಿ ಪ್ರಸಾರಕ್ಕೂ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕತವಾದಿ ಜೆಕೆಎಲ್‌ಎಫ್‌ನ ಮುಖಂಡ ಯಾಸೀನ್ ಮಲಿಕ್ ಸೇರಿದಂತೆ ಹಲವು ಮುಖಂಡರನ್ನು ಮುನ್ನೆಚ್ಚರಿಕೆ ಅಂಗವಾಗಿ ಬಂಧನದಲ್ಲಿ ಇರಿಸಲಾಗಿದೆ. ಅಲ್ಲದೇ ಮತ್ತೊಬ್ಬ ಪ್ರತ್ಯೇಕತವಾದಿ ಮುಖಂಡ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಎದೆನೋವಿನಿಂದ ಬಳಲುತ್ತಿರುವ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಣಿವೆ ಪ್ರದೇಶದಲ್ಲಿ ಕರ್ಫ್ಯೂ ಹೇರುತ್ತಿರುವುದಾಗಿ ಶನಿವಾರ ರಾತ್ರಿ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ದೂರದರ್ಶನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. |