ಭಯೋತ್ಪಾದಕ ಹಣಪಟ್ಟಿಯನ್ನು ಮುಸ್ಲಿಮರೆ ಮೇಲೆಯೇ ಯಾಕೆ ಇಡಲಾಗುತ್ತಿದೆ? ಹಿಂದೂ ಸಂಘಟನೆಗಳಾದ ಸನಾತನ್ ಪ್ರಭಾತ್ ಮತ್ತು ಭಜರಂಗದಳದ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಪೊಲೀಸರ ದ್ವಿಮುಖ ನಿಲುವಿನ ಬಗ್ಗೆ ಹರಿಹಾಯ್ದಿದ್ದಾರೆ.
'ನಾನು ಗೃಹ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ, ಭಯೋತ್ಪಾದಕರ ಹೆಸರನ್ನು ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಯಾಕೆ ಸೂಚಿಸುತ್ತಾರೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಇದು ತನಿಖೆಯ ಮೇಲೆ ಪ್ರಭಾವ ಬೀರುತ್ತದೆ' ಎಂದು ಪವಾರ್ ಹೇಳಿದ್ದಾರೆ.
ಸ್ಫೋಟದ ನಂತರ ಬಂಧಿತರಾದ ಎಲ್ಲರನ್ನೂ ಸ್ಫೋಟದ ರೂವಾರಿಗಳೆಂದು ಹೇಗೆ ಆರೋಪಿಸಲಾಗುತ್ತದೆ ಎಂಬುದಾಗಿ ಪವಾರ್ ಪ್ರಶ್ನಿಸಿದ್ದು, ಅಪರಾಧಿಗಳು ಮುಸ್ಲಿಮರೇ ಅಥವಾ ಹಿಂದುಗಳೇ ಎಂಬುದನ್ನು ಕಾನೂನು ನಿರ್ಧರಿಸಬೇಕು ಎಂದಿದ್ದಾರೆ.
ಥಾಣೆ ಹಿಂಸಾಚಾರದಲ್ಲಿ ಮತ್ತು ಸ್ಫೋಟದಲ್ಲಿ ಸನಾತನ್ ಪ್ರಬಾತ್ ಮತ್ತು ಭಜರಂಗದಳ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಆದರೆ, ಈ ವಿಚಾರವನ್ನು ಯಾರೊಬ್ಬ ಪೊಲೀಸರು ಎತ್ತಿ ಹಿಡಿಯಲಿಲ್ಲ ,ಇದು ಪೊಲೀಸರ ದ್ವಿಮುಖ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ವಿಚಾರಕ್ಕೆ ಮಾಧ್ಯಮಗಳೂ ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲ ಎಂದು ಆರೋಪಿಸಿದ ಅವರು, ಮಾಧ್ಯಮಗಳು ಸುದ್ದಿ ನೀಡುವಲ್ಲಿ ತಾರತಮ್ಯ ತೋರಬಾರದು ಎಂದು ಹೇಳಿದ್ದಾರೆ. |