ಇಲ್ಲಿನ ಜುಹು ಬಾರ್‌ವೊಂದರಲ್ಲಿ ನಡೆಯುತ್ತಿದ್ದ ರೇವ್ (ಮೋಜು ಕೂಟ) ಪಾರ್ಟಿಯ ಮೇಲೆ ಭಾನುವಾರ ರಾತ್ರಿ ಮುಂಬೈ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿ ಸುಮಾರು 241 ಮಂದಿಯನ್ನು ಬಂಧಿಸಿದ್ದು, ಎಂಟು ಮಂದಿ ಮಾದಕ ದ್ರವ್ಯ ಮಾರಾಟಗಾರರನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಬಾರ್‌ವೊಂದರಲ್ಲಿ ನಡೆಯುತ್ತಿದ್ದ ಮೋಜು ಕೂಟದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೂಂಡಿದ್ದು, ಅವರೆಲ್ಲ ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಯುವತಿಯರು, ಯುವಕರು ಸೇರಿದ್ದು, ಇದರಲ್ಲಿ ಇಸ್ರೇಲ್ ಪ್ರಜೆಯೊಬ್ಬ ಇದ್ದಿರುವುದಾಗಿ ತಿಳಿಸಿದ್ದಾರೆ.
ಮಾದಕ ವಸ್ತುಗಳು, ಮಾತ್ರೆ, ಎಲ್‌ಎಸ್‌ಡಿ ಡ್ರಾಪ್ಸ್‌ಗಳನ್ನು ವಶಪಡಿಸಿಕೊಂಡಿದ್ದು, ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು. ಬಂಧಿತರಲ್ಲಿ ಹಿಂದಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ ಕೂಡ ಇದ್ದಿರುವುದಾಗಿ ತಿಳಿಸಿದ್ದಾರೆ. |