ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದಾಳಿ, ನರಮೇಧವನ್ನು ತಡೆಯುವಲ್ಲಿ ಕೇಂದ್ರದ ಆಡಳಿತರೂಢ ಯುಪಿಎ ಸರ್ಕಾರ ದೃಢವಾದ ನಿರ್ಧಾರ ಕೈಗೊಳ್ಳದಿದ್ದಲ್ಲಿ ಮೈತ್ರಿಕೂಟದಿಂದ ಹೊರಬರುವುದಾಗಿ ತಮಿಳುನಾಡು ಮುಖ್ಯಮಂತ್ರಿ,ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಬೆದರಿಕೆ ಹಾಕಿದ್ದಾರೆ.
ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ತಮಿಳರ ಮೇಲೆ ತೀವ್ರತೆರನಾದ ದಾಳಿ ನಡೆಯುತ್ತಿದ್ದು, ಇದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿ ದಾಳಿ ತಡೆಯುವಂತೆ ಸೋಮವಾರ ಮನವಿ ಮಾಡಿಕೊಂಡಿದ್ದಾರೆ.
ಯುಪಿಎಗೆ ನೀಡಿದ ಬೆಂಬಲವನ್ನು ವಾಪಸು ತೆಗೆಯುವ ಕುರಿತು ಡಿಎಂಕೆಯ ವರಿಷ್ಠ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದ್ವೀಪರಾಷ್ಟ್ರದಲ್ಲಿ ಅಲ್ಪಸಂಖ್ಯಾತ ತಮಿಳರ ಮೇಲೆ ಶ್ರೀಲಂಕಾ ಸರ್ಕಾರ ಜನಾಂಗೀಯ ಹತ್ಯೆ ನಡೆಸುತ್ತಿರುವುದಲ್ಲದೆ, ಭಾರತೀಯ ಮೀನುಗಾರರನ್ನೂ ಕೂಡ ಹತ್ಯೆಗೈಯುತ್ತಿರುವುದು ಖಂಡನೀಯ ಎಂದು ಕರುಣಾನಿಧಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಕರುಣಾನಿಧಿ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಜನಾಂಗೀಯ ಹತ್ಯೆಯನ್ನು ಬಲವಾಗಿ ಪ್ರತಿಭಟಿಸುವುದಾಗಿ ಸೂಚನೆ ನೀಡಬೇಕಾಗಿ ವಿನಂತಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಏತನ್ಮಧ್ಯೆ ವಿರೋಧ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಕೂಡ ತಮಿಳರ ಹತ್ಯೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. |