ದಶಕಗಳಿಂದ ತಲೆಮರೆಸಿಕೊಂಡಿರುವ ಕುಖ್ಯಾತ ರಿಯಾಜ್ ಭಟ್ಕಳ ಎಂಬ ಸಿಮಿ ಭಯೋತ್ಪಾದಕv ಭಟ್ಕಳದ ಮನೆಯನ್ನು ಮುಂಬೈ ಮತ್ತು ಕರ್ನಾಟಕ ಪೊಲೀಸರು ಜಾಲಾಡಿದ್ದು, ಆತನ ಮನೆಯ ಮೊದಲ ಮಹಡಿ ಒಂದು ಪ್ರಯೋಗಾಲಯವಾಗಿ ಪರಿವರ್ತನೆಗೊಂಡಿರುವುದನ್ನು ಪತ್ತೆ ಹಚ್ಚಿದ್ದು, ದೆಹಲಿ, ಅಹಮದಾಬಾದ್ ಸರಣಿ ಸ್ಫೋಟಗಳಿಗೆ ಕರ್ನಾಟಕದಿಂದಲೇ ಬಾಂಬ್ ರವಾನೆಯಾಗುತ್ತಿತ್ತು ಎಂಬ ವಾದಕ್ಕೆ ಪುಷ್ಟಿ ದೊರೆತಿದೆ.
ಕರ್ನಾಟಕದ ಕರಾವಳಿ ತೀರದಲ್ಲಿರುವ ಭಟ್ಕಳದಲ್ಲಿರುವ ರಿಯಾಜ್ ಮನೆಯು ಇತರ ಯಾವುದೇ ಸಾಮಾನ್ಯ ಮನೆಯಂತಿತ್ತು. ಲಿವಿಂಗ್ ರೂಂ, ಅಡುಗೆ ಮನೆ ಮತ್ತಿತರ ಕೊಠಡಿಗಳಿದ್ದವು. ಆದರೆ ಮೊದಲ ಮಹಡಿಗೆ ಹೋಗಿ ನೋಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಎಲ್ಲ ರೀತಿಯ ಉಪಕರಣಗಳನ್ನು ಹೊಂದಿರುವ ಪ್ರಯೋಗಾಲಯವಾಗಿತ್ತದು. ರಾಸಾಯನಿಕ ಪದಾರ್ಥಗಳು, ರಸಾಯನಶಾಸ್ತ್ರ ಸಂಬಂಧಿತ ಉಪಕರಣಗಳು, ಕಂಪ್ಯೂಟರುಗಳು, ಕರಿಹಲಗೆ ಮತ್ತಿತರ ಅಧ್ಯಯನ ಸಂಬಂಧಿತ ವಸ್ತುಗಳು ಎಲ್ಲವೂ ಅಲ್ಲಿದ್ದವು. ಅದೊಂದು ಬಾಂಬ್ ತಯಾರಿಸುವ ಪ್ರಯೋಗಾಲಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕರಿಹಲಗೆಯಲ್ಲಿ ಬಾಂಬ್‌ನ ಹಾಗೂ ಇತರ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳ ವಿನ್ಯಾಸವನ್ನು ಬರೆಯಲಾಗುತ್ತಿತ್ತು. ರಿಯಾಜ್‌ಗೆ ಸೇರಿದ ಸೂಟ್‌ಕೇಸೊಂದನ್ನು ಪೊಲೀಸರು ತೆರೆದಾಗ, ಅದರಲ್ಲಿ ಬಟ್ಟೆ ಬರೆ ಮತ್ತಿತರ ವಸ್ತುಗಳಿದ್ದವು. ಯಾವುದೇ ತುರ್ತು ಪರಿಸ್ಥಿತಿ ಬಂದಲ್ಲಿ ಸಜ್ಜಾದಂತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದಲ್ಲದೆ, ನಾಲ್ಕು ಕೈಬಾಂಬುಗಳೂ ಈ ಸೂಟ್‌ಕೇಸಿನಲ್ಲಿದ್ದವು. ಬಹುಶಃ ಇವುಗಳನ್ನು ಆತ್ಮರಕ್ಷಣೆಗೆ ಬಳಸಲು ಉದ್ದೇಶಿಸಿದ್ದಿರಬಹುದು ಎಂದವರು ವಿಶ್ಲೇಷಿಸಿದ್ದಾರೆ.
ಮೂಲಗಳ ಪ್ರಕಾರ, ರಿಯಾಜ್ ತನ್ನ ಪತ್ನಿ ಮತ್ತು ನವಜಾತ ಶಿಶುವನ್ನು ನೋಡಲೆಂದು ಭಟ್ಕಳಕ್ಕೆ ಮಾರುವೇಷದಲ್ಲಿ ಬಂದಿದ್ದ ಹಾಗೂ ಸೆಪ್ಟೆಂಬರ್ 29-30ರ ಸುಮಾರಿಗೆ ಅಲ್ಲಿಂದ ತೆರಳಿದ್ದ. |