ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಈ ಬಂಧಿತ ಉಗ್ರನ ವೇತನ 19 ಲಕ್ಷ ರೂ.!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈ ಬಂಧಿತ ಉಗ್ರನ ವೇತನ 19 ಲಕ್ಷ ರೂ.!
ಇತ್ತೀಚಿನ ತಿಂಗಳುಗಳಲ್ಲಿ ದೇಶಾದ್ಯಂತ ಜನತೆಯಲ್ಲಿ ಭೀತಿ ಮೂಡಿಸಿದ್ದ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿ ಇತರ 14 ಉಗ್ರಗಾಮಿಗಳೊಂದಿಗೆ ಬಂಧಿತನಾಗಿದ್ದ 31ರ ಹರೆಯದ ಮೊಹಮದ್ ಮನ್ಸೂರ್ ಅಸ್ಗರ್ ಪೀರ್‌ಭಾಯ್ ಅಲಿಯಾಸ್ ಮುನಾವರ್ ಅಲಿಯಾಸ್ ಮನ್ನು ಒಬ್ಬ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಮತ್ತು ಭರ್ಜರಿ ವೇತನ ಪಡೆಯುತ್ತಿದ್ದ ಕಂಪ್ಯೂಟರ್ ಇಂಜಿನಿಯರ್ ಕೂಡ ಆಗಿದ್ದ.

ತನ್ನ ಕೌಶಲ್ಯವನ್ನೇ ಬಂಡವಾಳವಾಗಿಸಿಕೊಂಡಿದ್ದ ಮುನಾವರ್, ಜಾಗತಿಕ ಇಂಟರ್ನೆಟ್ ದೈತ್ಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೇ, ಉದ್ಯೋಗ ಸಂಬಂಧಿತ ಕೆಲಸಗಳಿಗಾಗಿ ಅಮೆರಿಕಕ್ಕೆ ಭೇಟಿ ನೀಡಬೇಕಾದಾಗಲೆಲ್ಲಾ ತನ್ನ ರಹಸ್ಯ ಕಾರ್ಯವನ್ನೂ ಮುಂದುವರಿಸುತ್ತಿದ್ದ. ಇದರಿಂದ ಆತನ ಚಲನವಲನದ ಕುರಿತು ಯಾವುದೇ ಅಧಿಕಾರಿಗಳಿಗೂ ಸಂದೇಹ ಮೂಡಿರಲಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಪುಣೆಯಲ್ಲಿರುವ ಇಂಟರ್ನೆಟ್ ಕಂಪನಿಯ ಹಿರಿಯ ಹುದ್ದೆಯಲ್ಲಿದ್ದ ಪೀರ್‌ಭಾಯ್, ವಾರ್ಷಿಕವಾಗಿ ಸುಮಾರು 19 ಲಕ್ಷ ರೂ. (ತಿಂಗಳಿಗೆ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು) ವೇತನ ಪಡೆಯುತ್ತಿದ್ದ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿವೆ. ಈತ ಇಂಡಿಯನ್ ಮುಜಾಹಿದೀನ್ ಸಂಘಟನೆಯ "ಮಾಧ್ಯಮ ಘಟಕ"ದ ನೇತೃತ್ವ ವಹಿಸಿದ್ದನೆನ್ನಲಾಗಿದೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯು ಸರಣಿ ಬಾಂಬ್ ಸ್ಫೋಟಿಸುವ ಕೆಲವೇ ನಿಮಿಷಗಳ ಮೊದಲು ವಿವಿಧೆಡೆಗೆ ಇ-ಮೇಲ್ ಸಂದೇಶ ರವಾನಿಸುತ್ತಿತ್ತು.

ಶ್ರೀಮಂತ ಕುಟುಂಬದಿಂದ ಬಂದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಪೀರ್‌ಭಾಯ್, ಸೆಪ್ಟೆಂಬರ್ 28ರಂದು ಬಂಧನಕ್ಕೊಳಗಾದಾಗ ಈ ಬಹುರಾಷ್ಟ್ರೀಯ ಕಂಪನಿಯ ಪ್ರಧಾನ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. "ಭಯೋತ್ಪಾದನೆ ಪ್ರಕರಣಗಳಲ್ಲಿ ಪೀರ್‌ಭಾಯ್‌ಯಂತಹ ವ್ಯಕ್ತಿಗಳನ್ನೂ ಬಂಧಿಸಬೇಕಾಗಿರುವುದು ಆಘಾತಕಾರಿ. ಈತ ಪುಣೆಯ ಸುಶಿಕ್ಷಿತ, ಶ್ರೀಮಂತ ಮುಸ್ಲಿಂ ಕುಟುಂಬದಿಂದ ಬಂದವನು" ಎಂದು ಅಧಿಕಾರಿಗಳು ಉಲ್ಲೇಖಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಹತ್ತನೇ ತರಗತಿಯಲ್ಲಿ ಶೇ.93 ಅಂಕ ಗಳಿಸಿದ್ದ ಪೀರ್‌ಭಾಯ್, 12ನೇ ತರಗತಿಯಲ್ಲಿ ಶೇ.98 ಅಂಕ ಪಡೆದಿದ್ದ, ಬಳಿಕ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದು ಬಹುರಾಷ್ಟ್ರೀಯ ಕಂಪನಿ ಸೇರಿಕೊಂಡಿದ್ದ.

"ರಿಯಾಜ್ ಭಟ್ಕಳ ಈತನನ್ನು ಮಸೀದಿಯೊಂದರಲ್ಲಿ ಭೇಟಿಯಾದಾಗಿನಿಂದ ಪೀರ್‌ಭಾಯ್ ಉಗ್ರವಾದದತ್ತ ಹೊರಳಿದ್ದ. ಈತನನ್ನು (ಸೂರತ್‌ನಲ್ಲಿ ಬಾಂಬ್ ಇರಿಸಿದ್ದಕ್ಕೆ ಸಂಬಂಧಿಸಿ ಬಂಧಿತನಾಗಿರುವ) ಮೆಕ್ಯಾನಿಕಲ್ ಎಂಜಿನಿಯರ್ ಅಸಿಫ್ ಬಶೀರ್ ಶೇಖ್‌ಗೆ ಪರಿಚಯಿಸಿದ್ದು ರಿಯಾಜ್ ಭಟ್ಕಳ್. ಪೀರ್‌ಭಾಯ್‌ನ ಬ್ರೈನ್ ವಾಶ್ ಮಾಡಿದ ಬಶೀರ್, ಆತನನ್ನು ಉಗ್ರಗಾಮಿಯನ್ನಾಗಿ ರೂಪಿಸಿದ್ದ. ಆತನಿಗೆ ಜಿಹಾದಿ ಸಾಹಿತ್ಯ ಓದುವಂತೆ ಮಾಡಲಾಯಿತು ಮತ್ತು ಪ್ಯಾಲೆಸ್ತೀನ್ ಬಿಕ್ಕಟ್ಟು, ಇರಾಕ್, ಗೋಧ್ರಾ ಮತ್ತು 1993ರ ಮುಂಬಯಿ ದಂಗೆಯ ವೀಡಿಯೋ ತುಣುಕುಗಳನ್ನು ತೋರಿಸಲಾಯಿತು. ಇದರೊಂದಿಗೆ, ಹಲವಾರು ಇಸ್ಲಾಮಿಕ್ ಬುದ್ಧಿಜೀವಿಗಳನ್ನೂ ಭೇಟಿ ಮಾಡಿಸಿ ಅವರಿಂದ ಬೋಧನೆ ಕೊಡಿಸಲಾಯಿತು" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

2007ರ ಮೇ ತಿಂಗಳಲ್ಲಿ ರಿಯಾಜ್ ಭಟ್ಕಳ, ಪೀರ್‌ಭಾಯ್ ಮತ್ತು ಕಂಪ್ಯೂಟರ್ ವಿಜ್ಞಾನ ಪದವೀಧರ ಮುಬಿನ್ ಅಲಿಯಾಸ್ ಸಲ್ಮಾನ್ ಖಾದರ್ ಶೇಖ್ (ಬಂಧಿತ) ಇಬ್ಬರಿಗೂ ತಲಾ 70 ಸಾವಿರ ರೂ. ನೀಡಿ, ಹೈದರಾಬಾದಿನಲ್ಲಿ ನಡೆಸಲಾಗಿದ್ದ "ಹ್ಯಾಕಿಂಗ್" ಕುರಿತ ತರಬೇತಿಯಲ್ಲಿ ಪಾಲ್ಗೊಳ್ಳಲು ಹೇಳಿದ್ದ. ಪೊಲೀಸ್ ಮೂಲಗಳ ಪ್ರಕಾರ, ಭಟ್ಕಳ್ ಮತ್ತು ಆತನ ಸಹೋದರ ಇಕ್ಬಾಲ್, ಆಸಿಫ್‌ಗೆ ಭಯೋತ್ಪಾದನಾ ಇ-ಮೇಲ್‌ಗಳಿಗೆ ಸಾಮಗ್ರಿಗಳನ್ನು ಒದಗಿಸುತ್ತಿದ್ದರು. ಮುಬಿನ್ ಜೊತೆ ಸೇರಿಕೊಂಡು ಆಸಿಫ್ ಮೇಲ್ ಕರಡು ಸಿದ್ಧಪಡಿಸುತ್ತಿದ್ದ. ಅಂತಿಮ ಪರಿಷ್ಕರಣೆಗಾಗಿ ಅವರು ಇದನ್ನು ಪೀರ್‌ಭಾಯ್‌ಗೆ ತೋರಿಸಲಾಗುತ್ತಿತ್ತು, ಯಾಕೆಂದರೆ ಆತನ ಇಂಗ್ಲಿಷ್ ಜ್ಞಾನ ಅತ್ಯದ್ಭುತವಾಗಿತ್ತು. ಯಾವುದೇ ಸುರಕ್ಷತೆಗಳಿಲ್ಲದ ವೈಫೈ ನೆಟ್ವರ್ಕ್‌ಗಳಿಗೆ ಹ್ಯಾಕಿಂಗ್ ಮಾಡಿ ಇ-ಮೇಲ್‌ಗಳನ್ನು ಕಳುಹಿಸಲಾಗುತ್ತಿತ್ತು ಎಂದು ಮೂಲಗಳು ವರದಿ ಮಾಡಿವೆ.

ಬಂಧಿತ ನಾಲ್ವರಲ್ಲಿ ಮೂವರು ಕೂಡ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಒಬ್ಬ ಚಾಲಕ (ಮೊಹಮದ್ ಅಕ್ಬರ್ ಇಸ್ಮಾಯಿಲ್ ಚೌಧುರಿ). ಇವರೆಲ್ಲರೂ ಸೇರಿಕೊಂಡೇ ಈ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ ಪೂರ್ಣ ಸಹಕಾರ: ಯಾಹೂ
ಈ ಮಧ್ಯೆ, ತನ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಪೀರ್‌ಭಾಯ್ ಕುರಿತ ತನಿಖೆಗೆ ಪೊಲೀಸರಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಯಾಹೂ ಪ್ರಕಟಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾಮಿಯಾ ವಿದ್ಯಾರ್ಥಿಗಳು ತಪ್ಪಿತಸ್ಥರಲ್ಲದಿದ್ದರೆ ಬೆಂಬಲ ವಾಪಸ್:ಎಸ್ಪಿ
ಬಜರಂಗದಳ ಭಯೋತ್ಪಾದಕ ಸಂಘಟನೆ:ಸರ್ಕಾರ
ಕಾಶ್ಮೀರ: ಕರ್ಫ್ಯೂ ಹಿಂತೆಗೆತ
ರಿಯಾಜ್ ಭಟ್ಕಳ ಮನೆಯಲ್ಲೇ ಬಾಂಬ್ ತಯಾರಿ?
ಯುಪಿಎ ತ್ಯಜಿಸುವೆ-ಕರುಣಾನಿಧಿ ಬೆದರಿಕೆ
ಅಸ್ಸಾಂ, ಪ. ಬಂಗಾಳದ ಮೇಲೇಕೆ ಕ್ರಮವಿಲ್ಲ?: ಆಡ್ವಾಣಿ