ಒರಿಸ್ಸಾದ ಕಂಧಮಾಲ್‌ನಲ್ಲಿ ಕ್ರೈಸ್ತ ನನ್ (ಸನ್ಯಾಸಿನಿ) ಮೇಲೆ ನಡೆದಿರುವ ಅತ್ಯಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿರೋಧ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ, ಸಮಾಜದಲ್ಲಿ ನಡೆಯುತ್ತಿರುವ ಬಲವಂತ ಮತ್ತು ಮರು ಮತಾಂತರವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ.
ಬಲವಂತದ ಮತಾಂತರ ಮತ್ತು ಮರು ಮತಾಂತರದಂತಹ ಕಾರ್ಯವನ್ನು ನಿಲ್ಲಿಸಬೇಕು ಎಂದು ಆಡ್ವಾಣಿ ಹಾಗೂ ಕ್ರೈಸ್ತ ಸಂಘಟನೆಯ ಮುಖಂಡರು ಬುಧವಾರದಂದು ಆಗ್ರಹಿಸಿದ್ದಾರೆ.
ಕಂಧಮಾಲ್‌ನಲ್ಲಿ ಮತ್ತೆ ಶಾಂತಿ ಸ್ಥಾಪಿಸಲು ಎರಡು ಸಮುದಾಯಗಳ ಮುಖಂಡರು ಪರಸ್ಪರ ಸಹಕರಿಸಿಬೇಕು ಎಂದ ಆಡ್ವಾಣಿ, ಧಾರ್ಮಿಕವಾಗಿ ನಡೆಯುತ್ತಿರುವ ಮತಾಂತರದ ಬಗ್ಗೆ ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ಮುಖಂಡರು ಸೌರ್ದಯುತವಾಗಿ ಮಾತುಕತೆ ನಡೆಸಬೇಕು ಎಂದು ಹೇಳಿದರು.
ಮತಾಂತರ ಮತ್ತು ಮರು ಮತಾಂತರ, ಅದಕ್ಕಾಗಿ ಬಲಪ್ರಯೋಗ ಮಾಡುವಂತಹದ್ದು ಸರಿಯಲ್ಲ,ಅದು ಒಂದು ಧರ್ಮದ ನಂಬಿಕೆ,ಅಂತಹ ಬಲವಂತದ ಕಾರ್ಯ ಖಂಡನೀಯ, ಇದನ್ನು ನಿಲ್ಲಿಸಲೇಬೇಕು ಎಂದು ಎರಡು ಸಮುದಾಯಗಳ ಮುಖಂಡರ ಜೊತೆ ನಡೆದ ಮಾತುಕತೆಯ ಬಳಿಕ ಜಂಟಿ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಒರಿಸ್ಸಾ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಕ್ರೈಸ್ತ ಸಮುದಾಯದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಮತ್ತು ಕ್ರೈಸ್ತ ಸಮುದಾಯದ ಪ್ರತಿನಿಧಿಗಳೊಂದಿಗೆ ಸೌಹಾರ್ದ ಮಾತುಕತೆ ಅಂಗವಾಗಿ ಬುಧವಾರ ಸಭೆ ನಡೆದಿತ್ತು. |