ಭಯೋತ್ಪಾದಕ ಸಂಘಟನೆ ಸಿಮಿ ಕುರಿತ ತನ್ನ ಅಭಿಪ್ರಾಯ ಬದಲಿಸಿರುವ ಸಮಾಜವಾದಿ ಪಕ್ಷ, ಸೂಕ್ತ 'ಸಾಕ್ಷ್ಯಾಧಾರ'ವಿದ್ದರೆ ಅದನ್ನು ನಿಷೇಧಿಸುವುದಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದೆ. ಅಲ್ಲದೆ, ಎಲ್ಲ ರೀತಿಯ ಮೂಲಭೂತವಾದಿ ಚಟುವಟಿಕೆಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿಯನ್ನು ಆಗ್ರಹಿಸಿದೆ.
ಒರಿಸ್ಸಾ ಮತ್ತು ಕರ್ನಾಟಕದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ನಡೆದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬಜರಂಗದಳವನ್ನು ನಿಷೇಧಿಸುವಂತೆಯೂ ಎಸ್ಪಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಪ್ರಧಾನಿಯವರನ್ನು ಗುರುವಾರ ಭೇಟಿಯಾದ ಸಂದರ್ಭದಲ್ಲಿ ಆಗ್ರಹಿಸಿದರು.
ಸಿಮಿಯನ್ನು ತಮ್ಮ ಪಕ್ಷವೆಂದಿಗೂ ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಉತ್ತರ ಪ್ರದೇಶದಲ್ಲಿ ಹಿಂದೆ ಆಡಳಿತ ಮಾಡುತ್ತಿದ್ದ ಎಸ್ಪಿ ಸರಕಾರಕ್ಕೆ ಸಿಮಿ ವಿರುದ್ಧ ಯಾವುದೇ ಸಾಕ್ಷಿ ದೊರೆತಿರಲಿಲ್ಲ ಎಂದರು. ಈಗ ಸಿಮಿ ವಿರುದ್ಧ ಏನಾದರೂ ದೊರೆತಲ್ಲಿ, ಸೂಕ್ತ ಕ್ರಮ ಜರುಗಿಸಲಿ ಎಂದವರು ನುಡಿದರು.
ಕಳೆದ ಆಗಸ್ಟ್ ತಿಂಗಳಲ್ಲಿ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸಿಮಿ ಮೇಲಿನ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದ್ದರು. ಅದು ಉತ್ತರ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದವರು ಕಾರಣ ನೀಡಿದ್ದರು. |