ಒರಿಸ್ಸಾದ ಕಂಧಮಾಲ್ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದ ದಾಳಿಯಿಂದ ತತ್ತರಿಸಿ ಹೋಗಿದ್ದ ಜನಜೀವನ ಇದೀಗ ಒಂದೂವರೆ ತಿಂಗಳ ಬಳಿಕ ಸಹಜಸ್ಥಿತಿಯತ್ತ ಮರಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆರು ದಿನಗಳಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪ್ರವೀಣ್ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆಗೋಸ್ಟ್ 23ರಂದು ವಿಶ್ವಹಿಂದೂ ಪರಿಷತ್‍ನ ಸ್ವಾಮಿ ಲಕ್ಷ್ಮಣಾನಂದ ಹಾಗೂ ಆಶ್ರಮದ ನಾಲ್ವರನ್ನು ಹತ್ಯೆಗೈದ ಘಟನೆಯ ನಂತರ ಒರಿಸ್ಸಾದ ಕಂಧಮಾಲ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 35ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಅರಣ್ಯ ಪ್ರದೇಶದಲ್ಲಿ ಮತ್ತು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರು.
ಸ್ವಾಮಿಯ ಹತ್ಯೆಯ ಹಿಂದೆ ಕ್ರೈಸ್ತ ಸಮುದಾಯ ಕೈವಾಡ ಇರುವುದಾಗಿ ಆರೋಪಿಸಿದ ಹಿಂದೂ ಸಂಘಟನೆಗಳು, ಕ್ರೈಸ್ತರ ಮನೆ , ಚರ್ಚ್‌ಗಳಿಗೆ ಬೆಂಕಿ ಇಡುವ ಮೂಲಕ, ಕಳೆದ ಒಂದುವರೆ ತಿಂಗಳ ಕಾಲ ಕೋಮುಹಿಂಸಾಚಾರದಲ್ಲಿ ನಲುಗಿ ಹೋಗಿತ್ತು.
ಸ್ವಾಮಿ ಹತ್ಯೆಯನ್ನು ಕ್ರೈಸ್ತ ಸಂಘಟನೆಗಳು ನಿರಾಕರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದಷ್ಟೇ ಮೂರು ಮಂದಿ ಮಾವೋವಾದಿಗಳನ್ನು ಪೊಲೀಸ್ ಇಲಾಖೆ ಬಂಧಿಸಿತ್ತು.
ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒರಿಸ್ಸಾಕ್ಕೆ 5 ಸಾವಿರ ಮಂದಿ ಪೊಲೀಸ್ ಹಾಗೂ ಅರೆಸೇನಾ ಪಡೆಯನ್ನು ಕಳುಹಿಸಿತ್ತು. ಆದರೂ ಒಂಬತ್ತು ನಗರಗಳಲ್ಲಿ ರಾತ್ರಿ ಕರ್ಫ್ಯೂವನ್ನು ಈಗಲೂ ಮುಂದುವರಿಸಿರುವುದಾಗಿ ಕುಮಾರ್ ತಿಳಿಸಿದರು. |